ಹೆಬ್ರಿ : ಹಿರಿಯ ಪತ್ರಕರ್ತನಾಗಿ ರಾಜ್ಯ ಮಟ್ಟದ ಕಾರ್ಮಿಕ ಮುಖಂಡನಾಗಿ ಗುರುತಿಸಿಕೊಂಡಿದ್ದ ವಿಷ್ಣು ಉಪಾಧ್ಯಾಯ(50) ಗುರುವಾರ ಮುಂಜಾನೆ ಹರಿಹರದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೂಲತ: ಹೆಬ್ರಿ ತಾಲ್ಲೂಕು ಮುದ್ರಾಡಿಯ ಬಲ್ಲಾಡಿಯವರಾದ ವಿಷ್ಣು ಉಪಾಧ್ಯಾಯ ಬಲ್ಲಾಡಿ ಮನೆತನದ ಶೀನಾ ಉಪಾಧ್ಯಾಯರ ಪುತ್ರ. ಹೆಬ್ರಿ ಪರಿಸರದಲ್ಲಿ ಶಿಕ್ಷಣ ಮುಗಿಸಿದ ಅವರು ಬಳಿಕ ಜಾದೂಗಾರನಾಗಿ ಖ್ಯಾತರಾಗಿದ್ದರು. ಮಾಧ್ಯಮ ಕ್ಷೇತ್ರದತ್ತ ಆಕರ್ಷಿತರಾಗಿ ಚಿಕ್ಕಮಗಳೂರಿನಲ್ಲಿ ನೆಲೆನಿಂತು ಪತ್ರಕರ್ತರಾಗಿ ಸೇವೆಸಲ್ಲಿಸಿದ್ದರು. ಮಲೆನಾಡಿನಲ್ಲಿ ಕಾರ್ಮಿಕರ ಕಷ್ಟ ಕಂಡು ಕಾರ್ಮಿಕರ ಸಂಘಟನೆ ಕಟ್ಟಿ ಹೋರಾಟಗಾರನಾಗಿ ರಾಜ್ಯಮಟ್ಟದ ಕಾರ್ಮಿಕ ನಾಯಕನಾಗಿ ಸೇವೆ ಸಲ್ಲಿಸಿದ್ದರು. 3 ದಶಶಕಗಳ ಕಾಲ ಪತ್ರಕರ್ತರಾಗಿದ್ದ ವಿಷ್ಣು ಉಪಾಧ್ಯಾಯ ಕ್ರಾಂತಿ ಮಾರುತ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿ ನಡೆಸುತ್ತಿದ್ದರು. ಬಹುಮುಖ ಪ್ರತಿಭೆಯ ಖ್ಯಾತ ಸಂಘಟಕರಾಗಿದ್ದ ಇವರು ರಾಜ್ಯದಾದ್ಯಂತ ಹಲವಾರು ಜನಪರ ಕಾರ್ಯಗಳು ಮೂಲಕ ಖ್ಯಾತರಾಗಿ ಉಡುಪಿ ಜಿಲ್ಲೆಯವರಾದರೂ ಚಿಕ್ಕಮಗಳೂರಿನವರಾಗಿಯೇ ಇದ್ದರು. ಮೃತರು ಅವಿವಾಹಿತರಾಗಿದ್ದರು.