“ಎಲ್ಲರಿಗೆ ಸಾಮಾಜಿಕ, ಆರ್ಥಿಕ ಮತ್ತುರಾಜಕೀಯ ನ್ಯಾಯವನ್ನು ನೀಡುವ, ಎಲ್ಲರಿಗೆ ಆಲೋಚನೆ, ನಂಬಿಕೆಗಳಿಗೆ ಮತ್ತುಆರಾಧನೆಗೆ ಮುಕ್ತವಾದ ಸ್ವಾತಂತ್ರ್ಯವನ್ನು ಒದಗಿಸುವ, ಎಲ್ಲರಿಗೆ ಅಂತಸ್ತುಗಳಿಲ್ಲದೇ ಸಮಾನವಾಗಿ ಜೀವಿಸಲು ಅವಕಾಶ ಕಲ್ಪಿಸುವ ಸಂವಿಧಾನವು ಆಚರಣೆಗೆ ಬಂದದ್ದು 1950 ಜನವರಿ 26ರಂದು. ಆ ಮೂಲಕ ಭಾರತಒಂದು ಗಣತಂತ್ರ ರಾಷ್ಟ್ರವಾಯಿತು. ಅದೊಂದು ಮಹೋನ್ನ ತಕ್ಷಣ” ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನಲ್ಲಿ73 ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಸಂದೇಶವನ್ನು ನೀಡುತ್ತ ಅವರು ಮಾತನಾಡುತ್ತಿದ್ದರು.
“ನಮ್ಮ ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಗೆ ಪ್ರತ್ಯೇಕ ಅರ್ಥವಿದೆ, ಸಂದೇಶವಿದೆ. ಕೇಸರಿ ಅನ್ನುವುದು ತ್ಯಾಗದ ಸಂಕೇತ, ಬಿಳಿ ಬಣ್ಣವು ಶಾಂತಿಯ ಸಂಕೇತ ಮತ್ತು ಹಸಿರು ಸಮೃದ್ಧಿಯ ಸಂಕೇತ. ದೇಶದ ಜವಾಬ್ದಾರಿಯುತ ಪ್ರಜೆಗಳು ನಾವಾಗಬೇಕು. ಗ್ರೀಕ್‍ತತ್ವವಿದರು ಹೇಳುವಂತೆ ರಾಷ್ಟ್ರದಲ್ಲಿ ಮೂರು ವರ್ಗಗಳಿವೆ. ಮೊದಲನೇಯದು ಇಡಿಯಟ್ಸ್ ಅಥವಾ ಮೂರ್ಖರ ವರ್ಗ. ತಾನು ಮತ್ತು ತನ್ನದಷ್ಟನ್ನೇ ಆಲೋಚಿಸುವ ಅತ್ಯಂತ ಸ್ವಾರ್ಥಿಯಾದ ವರ್ಗವಿದು. ಎರಡನೇಯದು ಸಂಸ್ಕೃತಿ ವಿಹೀನ ನಡವಳಿಕೆಯ ಅನಾಗರೀಕ ವರ್ಗ. ಮೂರನೇಯ ವರ್ಗವೇ ಪ್ರಜೆಗಳು –ದೇಶದ ಕುರಿತು ಸದಾಚಿಂತಿಸುವ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳುವ ವರ್ಗವಿದು. ದೇಶ ಉಳಿದು ಬೆಳೆಯುವುದು ಈ ಪ್ರಜೆಗಳಿಂದ. ರಾಷ್ಟ್ರಧ್ವಜದಲ್ಲಿರುವ ತ್ಯಾಗದ, ಶಾಂತಿಯ, ಸಮೃದ್ಧಿಯ ಬಣ್ಣಗಳು ಯಾವ ಸಂದೇಶ ನೀಡುತ್ತಲಿವೆಯೋ ಅದಕ್ಕೆ ಸರಿಯಾಗಿ ನಮ್ಮ ನಡೆ, ನುಡಿಇದ್ದಾಗದೇಶ ಸಮೃದ್ಧಿಯಕಡೆಗೆ, ಸುಭಧ್ರತೆಯ ದಿಕ್ಕಿನಲ್ಲಿ ಸಾಗುತ್ತದೆ. ನಮ್ಮ ನಿತ್ಯ ಜೀವನದಲ್ಲಿ ತ್ಯಾಗಕ್ಕೆ ಒತ್ತುಕೊಡಬೇಕು. ಶಾಂತಿ, ಸಹಬಾಳ್ವೆಗೆ ಗಮನ ಕೊಡಬೇಕು” ಎಂದು ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ನುಡಿದರು.
ಕ್ಯಾಡೆಟ್ ಜ್ಯೂನಿಯರ್ ಅಂಡರ್ ಆಫೀಸರ್ ನಾಚಪ್ಪ ಕೆ. ಖ ಇವರ ನೇತೃತ್ವದಲ್ಲಿ ಕಾಲೇಜಿನ ಎನ್‍ಸಿಸಿ ಕ್ಯಾಡೆಟ್ಟುಗಳು ಪಥ ಸಂಚಲನ ನಡೆಸಿದರು. ಯಕ್ಷ ಕಲಾ ಕೇಂದ್ರದ ಸಾಂಸ್ಕೃತಿಕ ತಂಡದ ಸದಸ್ಯರು ರಾಷ್ಟ್ರ ಭಕ್ತಿ ಗೀತೆಗಳನ್ನು ಹಾಡಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾದ್ಯ ವೃಂದದವರು ಬ್ಯಾಂಡ್‍ನುಡಿಸಿದರು.
ಪ್ರೊ. ಪ್ರಶಾಂತ್ ರೈ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಎನ್‍ಸಿಸಿ ಘಟಕದ ಅಧಿಕಾರಿ ಲೆ| ಜೋನ್ಸನ್ ಡೆವಿಡ್ ಸಿಕ್ವೆರಾ ಕಾರ್ಯಕ್ರಮವನ್ನು ಸಂಘಟಿಸಿದರು
ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವಂ| ವಿಜಯ್ ಲೊಬೋ, ಎಂಕಾಂ ವಿಭಾಗದ ಪ್ರಾಧ್ಯಾಪಕ ಮತ್ತು ಹಾಸ್ಟೆಲ್ ವಾರ್ಡನ್ ವಂ| ಅಶೋಕ್ ರಯಾನ್, ಅಧ್ಯಾಪಕರು, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ್ ಮತ್ತು ರೇಂಜರ್ ಘಟಕದ ಸದಸ್ಯರು, ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೊವಿಡ್ ಎಚ್ಚರಿಕೆ ಕ್ರಮಗಳ ಅನುಸರಣೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.