ಮಂಗಳೂರು ಆ.15: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಇಂದು 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ದಿನದ ಮಹತ್ವವನ್ನು ಹತ್ತನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ರಿಹಾನ್ ವಾಚಿಸಿದರು.
ಧ್ವಜಾರೋಹಣವನ್ನು ಹಿರಿಯ ವಕೀಲರು, ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಮೋನಪ್ಪ ಭಂಡಾರಿಯವರು ನೆರವೇರಿಸಿದರು. ಮಹಾತ್ಮಗಾಂಧೀಜಿ ಒಳಗೊಂಡು ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸಂಘಟಣೆಗಳ ಹೋರಾಟದ ಫಲವಾಗಿ 1947ರಂದು ನಮಗೆ ಸ್ವಾತಂತ್ರ್ಯದೊರಕಿತು. ದ.ಕ ಜಿಲ್ಲೆಯ ರಾಮಯ್ಯಗೌಡರವರು ಸುಳ್ಯ ಅಮರ್ ಎಂಬ ಸೇನೆಯನ್ನು ಕಟ್ಟಿಕೊಂಡು ಇಡೀ ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಹೋರಾಟವನ್ನು ನಡೆಸಿದವರು. ದುರಾದೃಷ್ಟವಷಾತ್ ಇಂಗ್ಲೀಷರು ಅವರನ್ನು ಹತ್ಯೆಗೈದರು. ಇಂತಹ ಮಹಾನ್ ಚೇತನರನ್ನು ಈ ದಿನದಂದು ನಾವೆಲ್ಲರು ಸ್ಮರಿಸಿಕೊಳ್ಳಬೇಕು.
ಇಡೀ ಜಗತ್ತಿನಲ್ಲೆ ನಮ್ಮ ಭಾರತದ ಸಂವಿಧಾನ ಬಹಳ ಪ್ರಾಮುಖ್ಯವಾದುದು ಹಾಗೂ ಬಹಳ ಮಾನ್ಯತೆ ಇದೆ. ಇದನ್ನು ನಮಗೆ ನೀಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಕೂಡ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು. ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಬಲಿಷ್ಟವಾಗಿಸಲು ಆತ್ಮ ನಿರ್ಭರ್ ಮತ್ತು ವಿಕಸಿತ್ ಭಾರತದಂತಹ ಯೋಜನೆಗಳನ್ನು ನಮ್ಮ ದೇಶದ ಪ್ರಧಾನಿಗಳು ಜಾರಿಗೆ ತಂದಿದ್ದಾರೆ. ಜಾತಿ, ಧರ್ಮಗಳ ಭೇಧ, ಭಾವ ಮಾಡದೆ ನಾವು ಎಲ್ಲರೂ ಭಾರತದ ಪ್ರಜೆಗಳು ಎಂಬ ಭಾವನೆಯನ್ನು ಹೃದಯದಲ್ಲಿ ಇಟ್ಟುಕೊಂಡು ದೇಶದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು. ಇಂದಿನ ಮಕ್ಕಳೇ ಮುಂದಿನ ಜನಾಂಗ, ನಮಗೆ ಸಿಕ್ಕಂತಹ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವುದರ ಮೂಲಕ ಸ್ವಾಭಿಮಾನಿಗಳಾಗಿ ಬದುಕಲು ಪರಮಾತ್ಮ ನಿಮ್ಮನ್ನು ಆಶೀರ್ವದಿಸಲಿ ಎಂದು ಹೇಳುತ್ತಾ ಆ ಮೂಲಕ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾೈಕ್, ಸಂಸ್ಥೆಯ ಟ್ರಸ್ಟಿ ಸಗುಣ ಸಿ. ನಾೈಕ್ , ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿಎಚ್. ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಂದೇ ಮಾತರಂ ಗೀತೆ, ನಂತರ ರಾಷ್ಟ್ರಗೀತೆ ಮತ್ತು ಧ್ವಜ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿ ಶ್ವೇತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.