ಮುಂಬಯಿ (ಆರ್‍ಬಿಐ), ಅ.18: ಯುವ ಜನತೆ ಕೃಷಿಯ ಬಗ್ಗೆ  ಉದಾಸೀನತೆ ತೋರಿ ಇತರ ಉದ್ಯೋಗಗಳತ್ತ  ನಗರ ಸೇರುವ ಹಿನ್ನಲೆಯಲ್ಲಿ  ಕೃಷಿಗೆ ಸಂಬಂಧಿಸಿದ  ವಿಶೇಷ ಹಾಡು  ಒರಾಲ್ ಅನ್ನು ಐಲೇಸಾ ದಿ  ವಾಯ್ಸ್ ಆಫ್ ಓಷನ್ ಸಂಸ್ಥೆ ಅಕ್ಟೊಬರ್  20ರಂದು  ಆದಿತ್ಯವಾರ ರಾತ್ರಿ 8:00 ಗಂಟೆಗೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ  ಬಿಡುಗಡೆಗೊಳಿಸಲಿದೆ. 

ಒರಾಲ್ ಎನ್ನುವುದು  ಹೆಚ್ಚಾಗಿ ಕೃಷಿ ಸಮಯದಲ್ಲಿ  ಉಳುಮೆಯ ಬೇಸರವನ್ನು, ಪ್ರಾಣಿಗಳ ಜಡ್ಡುತನವನ್ನು ಹೋಗಲಾಡಿಸಲು ರೈತರು ಹಾಡುವ ಒಂದು ವಿಶಿಷ್ಠ  ಆಲಾಪ . ಉಳುಮೆಯ  ಎತ್ತುಗಳನ್ನು ಸರಿ ದಾರಿಯಲ್ಲಿ  ಹೋಗುವಂತೆ ಜಾನಪದೀಯವಾಗಿ ಹಾಡುವ ಈ  ಲಯಬದ್ಧ ಹಾಡಿನಲ್ಲಿ  ಮನುಷ್ಯರಿಗೂ  ಹೊಂದುವಂತಹ  ಜೀವನ ರೀತಿಯೂ ಸಾಹಿತ್ಯವಾಗಿ ಹರಿದಾಡುತ್ತವೆ. ಪ್ರಾದೇಶಿಕವಾಗಿ ಒರಾಲ್ ಅನ್ನು ಉರಾಲ್, ಒರಲ್, ಉರಲ್  ಹೀಗೆ ಭಿನ್ನವಾಗಿ ಉಚ್ಚರಿಸುತ್ತಾರೆ.  ಇತ್ತೀಚಿನ ದಿನಗಳಲ್ಲಿ  ಕೃಷಿ  ಚಟುವಟಿಕೆಗಳು ಯಾಂತ್ರಿಕ ಗೊಂಡಿದ್ದರಿಂದ ಈ  ಊರಲಿನ ಧ್ವನಿ ಕ್ಷೀಣಗೊಂಡಿದ್ದು  ಕೇಳುವುದೇ ಅಪರೂಪವಾಗಿದೆ. ಇದನ್ನು ಮುಂದಿನ  ಪೀಳಿಗೆಗೆ  ಉಳಿಸುವ ನಿಟ್ಟಿನಲ್ಲಿ ಐಲೇಸಾ  ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್  ನೇತೃತ್ವದಲ್ಲಿ  ಈ ಹಾಡನ್ನು ಸಂಯೋಜನೆ ಗೊಳಿಸಿದೆ.  ಶಾಂತಾರಾಮ್ ವಿ. ಶೆಟ್ಟಿಯವರ ಸಾಹಿತ್ಯ ಇರುವ ಈ ಹಾಡಿನಲ್ಲಿ  ಹಿಂದಿನ ಸಾಂಪ್ರದಾಯಿಕ ಕೃಷಿಯ ವೈಭವ ಮತ್ತು ಆಧುನಿಕ ರಾಸಾಯನಿಕ ಕೃಷಿಯ  ತಪ್ಪುದಾರಿಗಳ ಬಗ್ಗೆ ಸೂಚ್ಯ  ಸಂವೇದನೆಯಿದೆ .

ಬೆಂಗಳೂರಿನ ಯುವ ಗಾಯಕ  ಆತ್ಮಾರಾಮ್  ಆಳ್ವ ಹಾಡನ್ನು ಹಾಡಿದ್ದು  ಮುಂಬೈಯಿಯ  ಖ್ಯಾತ ಧ್ವನಿ ಕಲಾವಿದ  ಸುರೇಂದ್ರ ಮಾರ್ನಾಡು  ಮತ್ತು ಯಕ್ಷ ಕಲಾವಿದ  ವಾಸುದೇವ ಮಾರ್ನಾಡು, ರಮೇಶ್ ಶೆಟ್ಟಿ ಪಣರೊಟ್ಟು, ಸಚ್ಚು  ಮಾರ್ನಾಡ್, ಅಜೇಶ್ ಚಾರ್ಮಾಡಿ  ಮೊದಲಾದ ಕಲಾವಿದರು  ಅಭಿನಯಿಸಿದ್ದಾರೆ.  ಸಂದೀಪ್ ಮೂಡಬಿದ್ರಿ  ಅವರ ಛಾಯಾಗ್ರಹಣ ಮತ್ತು  ಗೋಪಾಲ್ ಪಟ್ಟೆ ಯವರ  ಸಂಕಲನದಲ್ಲಿ  ಹಾಡು ಕೃಷಿ ಕಾರ್ಯದ  ದೃಶ್ಯಗಳು  ಸದಾ ಮೆಲುಕು ಹಾಕುವಂತೆ ಮೂಡಿ ಬಂದಿದೆ.

ತುಳುನಾಡಿನ ಮೂಲ ಸಂಸ್ಕೃತಿಯ ಬಗ್ಗೆ ವಿಶೇಷ ಕಾಳಜಿ ತೋರುವ  ಸೌದಿ  ಅರೇಬಿಯಾ  ನರೇಂದ್ರ ಶೆಟ್ಟಿ , ಸುಮನಾ ಶೆಟ್ಟಿ ದಂಪತಿಗಳು ಈ ಹಾಡನ್ನು ನಿರ್ಮಿಸಿದ್ದು ಬೆಹರೈನ್ ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈಯವರು "ಒರಾಲ್" ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ . ಅಮೇರಿಕಾದ AATA[ಆಟ]  ಸಂಸ್ಥೆಯ ಭಾಸ್ಕರ್ ಶೇರಿಗಾರ್  ಮತ್ತು ವಿ. ಮನೋಹರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೆಗ್ಡೆ ಆರೋಮೆಟಿಕ್ ಆಂಡ್ ಸಮಿತ್ ಕಾರ್ಪೋರೇಶನ್ ನ ಮಾಲೀಕರು ಮತ್ತು ನವೋದಯ ಕನ್ನಡ ಸೇವಾ ಸಂಘ ಥಾಣೆ-ಯ ಉಪಾಧ್ಯಕ್ಷರಾದ  ರಂಗನಟ ರವಿ ಹೆಗ್ಡೆ ಹೆರ್ಮುಂಡೆಯವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಅಕ್ಟೊಬರ್ 20 ರಾತ್ರಿ 8:00 ಗಂಟೆಗೆ  ಜೂಮ್  ವೇದಿಕೆ  https://zoom.us/j/5340283988 ಯಲ್ಲಿ ಬಿಡುಗಡೆಯಾಗುವ  ಈ ಹಾಡಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ನೇರವಾಗಿ  ಅಥವಾ ಜೂಮ್ ಐಡಿ : 5340283988 ಪಾಸ್ ಕೋಡ್ : 0324 ಮೂಲಕ  ಎಲ್ಲರೂ ಭಾಗವಹಿಸಲು ಐಲೇಸಾದ  ಖ್ಯಾತ ಗಾಯಕ  ರಮೇಶ್ಚಂದ್ರ  ಅವರು ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ  ಐಲೆಸಾದ ಮಾಧ್ಯಮ  ಸಂಚಾಲಕ  ವಿವೇಕ್ ಮಂಡೆಕರ  ಅವರನ್ನು 90082 42735 ಮೊಬೈಲ್ ಸಂಖ್ಯೆಯಲ್ಲಿ  ಸಂಪರ್ಕಿಸಬಹುದು.