ಎರಡು ತಿಂಗಳ ಹಿಂದೆ ಪೋಲೀಸು ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಎಂಬ ತರುಣಿ ಸತ್ತ ಬಳಿಕ ಭುಗಿಲೆದ್ದ ಪ್ರತಿಭಟನೆಗೆ ಬಾಗಿದ ಇರಾನ್ ಸರಕಾರವು ನೈತಿಕ ಪೋಲೀಸು ತುಕಡಿಯನ್ನು ರದ್ದು ಪಡಿಸಿತು. ಅಡ್ವಕೇಟ್ ಜನರಲ್ ಮೊಹ್ಮದ್ ಜಾಫರ್ ಮಾಂಟೆಜರಿಯವರು ನೈತಿಕ ಪೋಲೀಸು ಸೆಲ್ ರದ್ದು ಘೋಷಿಸಿದರು. ಮಹಿಳೆಯರ ತಲೆ ವಸ್ತ್ರದ ವಿಷಯವನ್ನು ಸಂಸತ್ತು ಮತ್ತು ನ್ಯಾಯಾಂಗ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಅವರು ಹೇಳಿದರು.

ನಿನ್ನೆ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸ್‌ರು ಸರಕಾರವು ಇಸ್ಲಾಂ ನಿಯಮಕ್ಕೆ ಬದ್ಧವಾಗಿರುವುದಾದರೂ ಕೆಲವು ಜನಪರ ಬದಲಾವಣೆಗೆ ಅವಕಾಶ ಇದೆ ಎಂದು ಹೇಳಿದ್ದರು.
ತಲೆವಸ್ತ್ರ ಧರಿಸಿಲ್ಲ ಎಂದು ಬಂಧಿಸಲ್ಪಟ್ಟ ಅಮಿನಿ ಕಸ್ಡಡಿ ಸಾವಿನ ಬಳಿಕ ಇರಾನ್ ಮಹಿಳೆಯರು ಬೀದಿಗಿಳಿದರು. ಮುಂದೆ ಯುವಕರು ಸೇರಿಕೊಂಡು ಕಟ್ಟಾ ಮುಸ್ಲಿಮರ ಮುಂಡಾಸು ಹಾರಿಸುವ ಚಳವಳಿ ನಡೆಸಿದರು. ಬಂಧನ, ಜೈಲು ಶಿಕ್ಷೆ, ಮರಣ ದಂಡನೆವರೆಗೆ ಪ್ರಕರಣ ಹೋದರೂ ಪ್ರತಿಭಟನಾಕಾರರು ಬಾಗಲಿಲ್ಲ. ತಲೆವಸ್ತ್ರ ಸುಡುವ, ಕೂದಲು ಕತ್ತರಿಸಿಕೊಳ್ಳುವ ಪ್ರತಿಭಟನೆಗಳು ಹೆಚ್ಚಿದವು. ಅಂತಿಮವಾಗಿ ಸರಕಾರ ನೈತಿಕ ಪೋಲೀಸು ಸೆಲ್ ರದ್ದು ಪಡಿಸಿ, ಧಾರ್ಮಿಕ ಆಚರಣೆಗೂ ಪೋಲೀಸರಿಗೂ ಸಂಬಂಧ ಇಲ್ಲ ಎಂದು ತಿಳಿಸಿದೆ.