ವಿಮಾನದಲ್ಲಿ, ಹೆಲಿಕಾಪ್ಟರ್‌ನಲ್ಲಿ ಓಡಾಡುವಾಗ ನೋಡದ್ದನ್ನೆಲ್ಲ ಒಂದಷ್ಟು ದೂರ ಭಾರತ್ ಜೋಡೋ ಯಾತ್ರೆಯಲ್ಲಿ ನಡೆಯುವಾಗ ನೋಡಿದೆ ಮತ್ತು ಹೊಸತುಗಳನ್ನೆಲ್ಲ ಕಲಿತೆ ಎಂದು  ರಾಹುಲ್ ಗಾಂಧಿಯವರು ಹೇಳಿದರು.


ಎಲ್ಲೆಡೆ ಪ್ರೀತಿ, ಸ್ನೇಹ, ಬೆಂಬಲ ಸಿಗುತ್ತಿದೆ ಎಂದೂ ಅವರು ಹೇಳಿದರು. ಮಧ್ಯ ಪ್ರದೇಶದ ಅಗರ್ ಮಾಳ್ವಾ ಜಿಲ್ಲೆಯಿಂದ ಚನ್ವಲಿ ನದಿಯ ಸೇತುವೆ ದಾಟಿ ಭಾರತ್ ಜೋಡೋ ಯಾತ್ರೆಯು ನಿನ್ನೆ ಸಂಜೆ ರಾಜಸ್ತಾನವನ್ನು ಪ್ರವೇಶಿಸಿತು. ರಾತ್ರಿ ಅವರು ಚವನ್ಲಿ ಚೌರಾಹದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಮೇಲಿನಂತೆ ಹೇಳಿದರು.

2023ರ ಫೆಬ್ರವರಿ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಕೊನೆಗೊಳ್ಳಲಿದೆ. 150 ದಿನಗಳ 3,570 ಕಿಲೋಮೀಟರ್‌ಗಳ ಯಾತ್ರೆ. ರಾಜಸ್ತಾನದಲ್ಲಿ 17 ದಿನ‌ ಸಂಚರಿಸಿ ಹರಿಯಾಣ ಪ್ರವೇಶಿಸುತ್ತದೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶಗಳನ್ನು ಭಾರತ್ ಜೋಡೋ ಯಾತ್ರೆ ಈಗಾಗಲೇ ಹಾದು ಹೋಗಿದೆ.