ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಸರಕಾರ, ರಾಜಕಾರಣಿಗಳು ಸೆಪ್ಟೆಂಬರ್ ಬಂದಾಕ್ಷಣ ಶಿಕ್ಷಕರಿಗೇ ಬುದ್ಧಿ ಹೇಳಲು, ಮೊಸಳೆ ಕಣ್ಣೀರು ಸುರಿಸಲು ಪ್ರಾರಂಭಿಸುತ್ತಾರೆ. ಯಾವ ಮಗು ವಿದ್ಯಾ ಆಕಾಂಕ್ಷಿಯಾಗಿ ಬಂದರೂ ಮೋಸ ಮಾಡದೇ ನಿಷ್ಠೆಯಿಂದ ದುಡಿದ ಶಿಕ್ಷಕರಿಗೆ ವೇತನ ಇತ್ಯಾದಿ ನೀಡಲು ಇಲ್ಲಸಲ್ಲದ ನೆಪಗಳನ್ನು ಹುಡುಕಿ ಸತಾಯಿಸಲಾಗುತ್ತದೆ. ಸರಕಾರಿ ಹುದ್ದೆಯಲ್ಲಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಂಗಳು ಮುಗಿಯುವ ಮೊದಲೇ ಸಂಬಳ ಆಗುತ್ತದೆ. ಆದರೆ ಅದೇ ಇಲಾಖೆಯ ಅಡಿ ದುಡಿಯುವ ಅನುದಾನಿತ ಶಾಲಾ ಶಿಕ್ಷಕರಿಗೆ ಅಲ್ಲೂ ಹಲವಾರು ಎಡರು -ತೊಡರು, ಆಡಳಿತ ಮಂಡಳಿಯ ಪೀಕಲಾಟಗಳು. ಉದ್ಯೋಗದಲ್ಲಿರುವಾಗ ಒಂದು ಪ್ರಕಾರವಾದರೆ, ಉದ್ಯೋಗದಿಂದ ನಿವೃತ್ತರಾದ ನಂತರ ಇತರ ಹಲವು ವಿಧದ ಪೀಕಲಾಟಗಳು. ಪ್ರತಿಯೊಂದಕ್ಕೂ ಆಡಳಿತ ಮಂಡಳಿಯ ಕೈಕಾಯುವ ಪ್ರಮೇಯ, ಇಲಾಖಾಧಿಕಾರಿಗಳ ಉಪೇಕ್ಷೆ, ಖಜಾನಾಧಿಕಾರಿಗಳ ಹಣಕ್ಕಾಗಿ ಹಪಹಪಿಕೆ ಈ ಪ್ರಕಾರ ಪ್ರತಿಯೊಂದು ಹಂತದಲ್ಲೂ ಅಡೆ ತಡೆ ತೊಂದರೆ ತಕರಾರುಗಳು.
ತಮ್ಮದಲ್ಲದ ತಪ್ಪಿಗೆ ಬಸವಳಿಯುತ್ತಿರುವ ಅನುದಾನಿತ ಶಾಲಾ ನಿವೃತ್ತರು: ಸರಕಾರ ಬಹಳ ಹಿಂದಿನಿಂದಲೂ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲೇ ಆಡಳಿತ ಮಂಡಳಿಯಿಂದ ಹುದ್ದೆಯ ಅನುಮೋದನಾ ವಿವರಗಳನ್ನು ಪಡೆದಿರುತ್ತದೆ. ಹುದ್ದೆಯ ಸೂಕ್ತ ಮಂಜೂರಾತಿಯನ್ನು ಶಾಲಾ ಪ್ರಾರಂಭದ ಸಂದರ್ಭದಲ್ಲಿಯೇ ಹೊಂದಿಲ್ಲವೆಂದಾದಲ್ಲಿ ಯಾವುದೇ ಹುದ್ದೆಯ ನೇಮಕಾತಿಯನ್ನು ಅನುಮೋದಿಸುವುದಿಲ್ಲ.
ಹೀಗಿದ್ದೂ 2024 ಫೆಬ್ರವರಿ ಲಾಗಾಯ್ತು ನಿವೃತ್ತರಾದ ಅನುದಾನಿತ ಶಾಲಾ ಶಿಕ್ಷಕರ ಹುದ್ದೆಯ ಸೃಷ್ಟಿಯ ಸಂದರ್ಭದ ದಾಖಲೆಯನ್ನು ಈಗ ನಿವೃತ್ತರಾದ ಸಮಯದಲ್ಲಿ ಶಿಕ್ಷಕರಿಂದ ಕೇಳುತ್ತಿದೆ. ಅಂತಹ ದಾಖಲೆಗಳನ್ನು ಹೊಂದಿರಬೇಕಾಗಿರುವವರು ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಹುದ್ದೆಯ ಸೃಷ್ಟಿಗೆ ಒಪ್ಪಿಗೆ ನೀಡಿದ ಶಿಕ್ಷಣ ಇಲಾಖೆಯವರೇ ಹೊರತು ಅಲ್ಲಿ ದುಡಿಯುವ ನೌಕರರಲ್ಲ ಎನ್ನುವ ಪ್ರಾಥಮಿಕ ಜ್ಙಾನವೂ ಬೆಂಗಳೂರು ಎ.ಜೆ. / ಪರಿಶೋಧನಾ ಕಚೇರಿಯವರಿಗೆ ಇಲ್ಲದಿರುವುದು ಅತ್ಯಂತ ಆಶ್ಚರ್ಯ ಹುಟ್ಟಿಸಿದೆ.
ಫೆಬ್ರವರಿ 2024 ರ ತರುವಾಯ ನಿವೃತ್ತರಾದ ರಾಜ್ಯದ ನೂರಾರು ಅನುದಾನಿತ ಶಾಲಾ ನೌಕರರು ಎ.ಜೆ. ಕಚೇರಿಯವರ ಈ ಮೇಲ್ಕಂಡ ದಾಖಲೆಯನ್ನು ಒದಗಿಸಲು ಆಡಳಿತ ಮಂಡಳಿಯನ್ನು ಕಾಡಿ-ಬೇಡಿದರೂ ಅವರಲ್ಲಾಗಲೀ, ಶಿಕ್ಷಣ ಇಲಾಖೆಯಲ್ಲಾಗಲೀ ಸಂಬಂಧಿಸಿದ ದಾಖಲೆ ದೊರಕದ ಕಾರಣ ನಿವೃತ್ತಿ ಉಪಾದಾನ ದೊರಕದೆ ಕಂಡಕಂಡವರಲ್ಲಿ ಕಾಡಿಬೇಡಿ ಬದುಕುತ್ತಿದ್ದಾರೆ. ಶಿಕ್ಷಕರಿಗೇ ಬುದ್ಧಿ ಹೇಳುವ, ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳು, ಅಧಿಕಾರಿಗಳು ಈಗ ಏನು ಮಾಡುತ್ತಿದ್ದಾರೆ?
ಸರಕಾರಿ ನೌಕರರಿಗೆ ನಿವೃತ್ತರಾದ ತಕ್ಷಣ ದೊರಕುವ ನಿವೃತ್ತಿ ಉಪಾದಾನ ಅನುದಾನಿತ ಶಾಲಾ ಶಿಕ್ಷಕರಿಗೆ ಏಕೆ ದೊರಕಬಾರದು? ಅವರೇನು ತಪ್ಪು ಮಾಡಿದ್ದಾರೆ? ನಿವೃತ್ತರಾದ ತಕ್ಷಣ ನಿವೃತ್ತಿ ಉಪಾದಾನ ನೀಡುವಂತಾಗಬೇಕು ಎಂಬ ಸರಕಾರದ ಆಜ್ಞೆಗೆ ಅನುದಾನಿತ ಶಾಲಾ ಶಿಕ್ಷಕರು ಒಳಗೊಳ್ಳುವದಿಲ್ಲವೇ? ಸರಕಾರದ ವೈರುಧ್ಯಕ್ಕೆ ಕೊನೆ ಇಲ್ಲವೇ ಎಂದು ಅನುದಾನಿತ ಶಾಲಾ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.