- By ನಾಗೇಶ್ ಗಡಿಗೇಶ್ವರ(ಮಸಣದ ಕಾವಲುಗಾರ )

ಅಂದಿನ ಬದುಕು ಹಾಗೂ, ಇಂದಿನ ಬದುಕು ಎಂದಾಗ ನಮ್ಮಲ್ಲಿ ಜನರು ಹಲವು ಅಭಿಪ್ರಾಯ ಕೊಡುತ್ತಾರೆ. ಕೆಲವರು, ಅಂದಿನ ಜೀವನ ಶೈಲಿ ಚೆನ್ನಾಗಿತ್ತು, ಕೂಡು ಕುಟುಂಬ ಚೆನ್ನಾಗಿತ್ತು, ಬಾಂಧವ್ಯ ಚೆನ್ನಾಗಿತ್ತು, ನೆಮ್ಮದಿಯಿಂದ ಇತ್ತು. ನಮ್ಮ ಮತ್ತು ಪ್ರಕೃತಿಯೊಂದಿಗಿನ ಒಡನಾಟದಿಂದ ಆರೋಗ್ಯ ಚೆನ್ನಾಗಿರುತಿತ್ತು. ಪ್ರಾಣಿಗಳೊಂದಿಗೆ ಹೊಂದಿಕೊಂಡಿರುತ್ತಿದ್ದೆವು. ಖುಷಿಯಿಂದದಿತ್ತೆನ್ನುವರು.

ಇಂದು ವೈಜ್ಞಾನಿಕವಾಗಿ ನಾವು ಮುಂದುವರೆದಿದ್ದೇವೆ. ಶಿಕ್ಷಣದಲ್ಲಿ ಮುಂದುವರೆದಿದ್ದೇವೆ. ದೇಶದ ಪ್ರಗತಿಯನ್ನು ಕಾಣುತ್ತಿದ್ದೇವೆ ಎಂದು ಹೇಳುವವರು ಕೆಲವರು.

ಹಾಗೇ ಅಂದು ಮತ್ತು ಇಂದು ಎರಡು ಚೆನ್ನಾಗಿದೆ, ಆದರೆ ಇಂದು ನೆಮ್ಮದಿ ಇಲ್ಲ ಅಷ್ಟೇ ಎನ್ನುತ್ತಾರೆ ಹಲವರು.

ಇನ್ನೂ ಕೆಲವು ವಿಮರ್ಶಕರು ಹೇಳುತ್ತಾರೆ,..ಇಂದು ಮನುಷ್ಯನ ಅತಿ ಆಸೆಯೇ ದು:ಖಕ್ಕೆ ಕಾರಣ. ಹಾಗಾಗಿ ನಮಗೆ ತೃಪ್ತಿಯೆನ್ನುವುದಿಲ್ಲ. ಅರಿಷಡ್ವರ್ಗಗಳ ತೀವ್ರತೆ ಹೆಚ್ಚಾಗಿ, ಮನುಷ್ಯನು ತುಂಬ ನೀಚ ಸ್ಥಿತಿಗೆ ತಲುಪುತ್ತಿದ್ದಾನೆ ಅಂತ.

ನಿಜ, ಇವೆಲ್ಲ ವಿಮರ್ಶೆ ಮಾಡಿ ನೋಡಿದಾಗ ಮೇಲ್ನೋಟಕ್ಕೆ ಸರಿಯೆನಿಸಿದರೂ, ಅಂದಿನಂತೆ ಮನುಷ್ಯ ಇಂದು ಇರದಿರಲು ಮುಖ್ಯ ಕಾರಣವೇನು ಎಂಬ ಪ್ರಶ್ನೆ ಹಾಗೆಯೇ ಉಳಿಯುವುದು.!? ಇದಕ್ಕೆ ಉತ್ತರ: ನಾವು ಸೇವಿಸುವ ಆಹಾರ.! ನಿಯಮಿತವಿಲ್ಲದ ಆಹಾರ ಪದ್ದತಿ..!

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಆಹಾರದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ. ನಾವು ಸೇವಿಸು ಆಹಾರ, ನಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುವುದೆಂದು.

ನಾವು ಸೇವಿಸುವ ಆಹಾರದಲ್ಲಿ ಸಾತ್ವಿಕ, ರಾಜಸ, ತಾಮಸ ಗುಣಗಳಿಂದ ನಮ್ಮ ಆಲೋಚನೆಯ ಪ್ರವೃತ್ತಿಯಿರುತ್ತದೆಯೆಂದು ಹೇಳಿದ್ದಾರೆ.

ಪ್ರಾಚೀನರು ಇದನ್ನು ಚೆನ್ನಾಗಿ ಅರಿತಿದ್ದರು. ಹಾಗೂ ಕೆಲವು ನಿಯಮಗಳನ್ನು ಹಾಕಿಕೊಂಡಿದ್ದರು. ಯಾರು ಕುಟೀರ ಅಧ್ಯಯನ ಅಭ್ಯಾಸದಲ್ಲಿ ತೊಡಗುತ್ತಾರೋ, ಅವರಿಗೆ ಸಾತ್ವಿಕವಲ್ಲದ ಆಹಾರ ನಿಷಿದ್ದಗೊಳಿಸಿದ್ದರು.

ಆಯುಃ ಸತ್ವ ಬಲಾರೋಗ್ಯ ಸುಖ ಪ್ರೀತಿ ವಿವರ್ಧನಾಃ ।ರಸ್ಯಾಃ ಸ್ನಿಗ್ದಾಃ ಶ ಸ್ಥಿರಾ ಹೃದ್ಯಾ ಆಹಾರಃ ಸಾತ್ವಿಕ ಪ್ರೀಯಾಃ॥ ಇದರ ಅರ್ಥ ಆಯಸ್ಸು ಬುದ್ದಿಬಲ, ಆರೋಗ್ಯ, ಸುಖ, ಪ್ರೀತಿಯನ್ನು ಹೆಚ್ಚಿಸುವ ರಸಯುಕ್ತ, ಸ್ನೇಹಯುಕ್ತ, ಸ್ಥಿಗ್ದ ಸ್ಥಿರ ಸ್ವಭಾವವುಳ್ಳ ಆಹಾರ ಪದಾರ್ಥಗಳು ಸಾತ್ವಿಕ ಗುಣಕ್ಕೆ ಹೆಚ್ಚು ಒತ್ತುಕೊಡುತ್ತವೆ.  

ರಾಜಸ, ತಾಮಸ,  ಗುಣಗಳುಳ್ಳ ಆಹಾರಗಳಾವುವು ಎಂದು ಅವರು ತಿಳಿದು... ಇದು ತಿನ್ನಬಹುದು, ಇದು ತಿನ್ನಬಾರದೆಂದು ಹೇಳುತ್ತಿದ್ದರು.

ನಮಗೆ ಅರಿವಿಲ್ಲದೆಯೆ ಅದು ಹಿಂದಿನವರಂತೆ ರೂಢಿಯಲ್ಲಿತ್ತು. ಆದರೆ ಇಂದು ಅದನ್ನೆಲ್ಲ ಮರೆತಿದ್ದೇವೆ.

ಅದು ಹೇಗೆ ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಎಲ್ಲದಕ್ಕೂ ಸಂಬಂಧ ಇದೆ..! ನಾವು ದಿನೇ ದಿನೇ, ಕಲಬೆರಕೆಯ ಆಹಾರ ಸೇವಿಸುವುದರಿಂದ ಹಾಗೂ ನಿಯಮಿತವಲ್ಲದ ಆಹಾರದಲ್ಲಿ ಪದ್ದತಿ ಇಲ್ಲದೆ ಇರುವುದರಿಂದ, ಮನುಷ್ಯನ ಆಯಸ್ಸಿನ ಜೊತೆ, ಮನುಷ್ಯನ ಅರಿಷಡ್ವರ್ಗಗಳ ಮೇಲೆ ಪ್ರಭಾವ ಬೀರಿ, ಮನುಷ್ಯತ್ವ ಕಳೆದುಕೊಳ್ಳುವಂತೆ ಮಾಡುತ್ತದೆ. ದಿನಾ.. ನಮಗೆ ಮಾಂಸಹಾರ ಬೇಕು. ಫಾಸ್ಟ್ ಫುಡ್, ಜಂಕ್ ಫುಡ್ ಬೇಕು. ತರಕಾರಿಗಳಿಂದ ಹಿಡಿದು ಲಾಭಕ್ಕಾಗಿ ಕುಡಿಯುವ ಹಾಲಿನ ತನಕ..!

ಇಂಜೆಕ್ಷನ್ ಹಾಗೂ ರಾಸಯನಿಕ ವಸ್ತುಗಳ ಬಳಕೆಯಿಂದ, ಒಂದು ಸಿಲಿಂಡರ್ ಎತ್ತುವ ತಾಕತ್ತನ್ನೂ ನಾವು ಕಳೆದು ಕೊಂಡಿದ್ದೇವೆ. ಆಹಾರವು ಮನುಷ್ಯನ ಶರೀರದಿಂದ, ಆಲೋಚನೆಗೆ ಹೊಕ್ಕು ಉತ್ತಮ ಸಂಸ್ಕಾರಕ್ಕೆ ಪೂರಕವಾಗಬಲ್ಲದು ಎಂಬುದು ನನ್ನ ಉದ್ದೇಶ. ಹಿಂದೆ ನೀವು ಕೇಳಿರಬಹುದು. जैसा संग वैसा रंग  ( ಜೈಸಾ ಸಂಗ್ ವೈಸಾ ರಂಗ್) ಎಂಬ ಮಾತನ್ನ ಎರಡು ಗಿಳಿಗಳ ಕಥೆಯ ಮೂಲಕ ಕೇಳಿರಬಹುದು. ಇದು ವ್ಯಕ್ತಿಯ ಸ್ವಭಾವದಿಂದ, ಪರಿವರ್ತನೆಯಾದ ಪಕ್ಷಿಗಳ ಸ್ವಾಭಾವ ತೋರಿಸುತ್ತದೆ.

ಗುರುಕುಲದಲ್ಲಿನ ಹಾಗೂ ಕಟುಕನ ಜೊತೆ ಬೆಳೆದ ಗಿಳಿಗಳ ವರ್ತನೆಯಲ್ಲಿ ಉಂಟಾಗುವ ವ್ಯತ್ಯಾಸ ನಾವು ಸ್ಮರಿಸಬಹುದು.

ಈ ದೇಹವು ನಾವು ಸೇವಿಸಿದ ಆಹಾರಕ್ಕೆ ತಕ್ಕಂತೆ ಪ್ರವೃತ್ತಿಯನ್ನು ಹೊರ ಹಾಕುತ್ತದೆ. ಹಾಗೇ ನಮ್ಮಂತೆ ನಮ್ಮ ಮುಂದಿನ ಪೀಳಿಗೆಗಳು ಅನುಸರಿಸುತ್ತದೆ..!

ನಾವೀಗ ರಾಕ್ಷಸರಾಗುತ್ತಿದ್ದೇವೆ. ಬೇಗ ಎಚ್ಚರಗೊಂಡರೆ ಉತ್ತಮ. ಮೇಲ್ನೋಟದ ಸಾವಿರ ತಪ್ಪುಗಳನ್ನು ಗುರುತಿಸಿ ಹೇಳುವ ಬದಲು, ಇಂಥಹ ಸೂಕ್ಷ್ಮ ಪ್ರಜ್ಞೆ ನಮಗೆ ಖಂಡಿತವಾಗಿಯು ಬೇಕು..!ಅಲ್ಲವೆ..?

ಇದು ನನ್ನ ಅಭಿಪ್ರಾಯ ಅಷ್ಟೇ. 'ಸರ್ವೇ ಜನಃ ಸುಖಿನೋ ಭವಂತು'।