ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದ ವತಿಯಿಂದ “ಆಂಡ್ರಾಯ್ಡ್ ಅಪ್ಲಿಕೇಶನ್‌ ಡೆವಲಪ್‌ಮೆಂಟ್” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನಡೆಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು “ಇಂದಿನ ಬದಲಾವಣೆ ಹಾಗೂ ವೇಗವೇ ಪ್ರಧಾನವಾದ  ಜಗತ್ತಿನಲ್ಲಿ, ಮೊಬೈಲ್ ಅಪ್ಲಿಕೇಶನ್‌ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರುವುದರಿಂದ ಹಿಡಿದು ನಮ್ಮ ಹಣಕಾಸು ನಿರ್ವಹಣೆಯವರೆಗೆ, ಈ ಅಪ್ಲಿಕೇಶನ್‌ಗಳು ನಾವು ಪ್ರಪಂಚದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡಿದವೆ.  ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸಹಯೋಗದ ಮನೋಭಾವವನ್ನು ಮೂಡಿಸುತ್ತದೆ. ಮುಂದಿನ ಪೀಳಿಗೆಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ರೂಪಿಸುವ ಕೌಶಲ್ಯವನ್ನು ಅಭಿವೃದ್ಧಿಗೊಳಿಸುತ್ತದೆ. ತಾಂತ್ರಿಕ ಪ್ರಗತಿಯು ದೇಶದ ಪ್ರಗತಿಯನ್ನು ಸೂಚಿಸುತ್ತದೆ” ಎಂದು ಹೇಳಿದರು. 

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರಿನ ಸಹ್ಯಾದ್ರಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್‌ ಸಯನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹರೀಶ್‌ ರವರು “ಕಾರ್ಯಗಾರಗಳು, ಚರ್ಚಾ ಕಾರ್ಯಕ್ರಮಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ” ಎಂದು ಹೇಳಿದ ಅವರು ಪ್ರಪಂಚದಾದ್ಯಂತ ನಡೆಯುತ್ತಿರುವ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳಿಗೆ ಬಲಿಯಾಗದಂತೆ ಇರಬೇಕಾದಲ್ಲಿ ಅನುಸರಿಸುವ ಮುಂಜಾಗ್ರತಾಕ್ರಮಗಳನ್ನು ತಿಳಿಸಿದರು. 

ಅಪರ್ಣಾ ಮತ್ತು ಬಳಗ ಪ್ರಾರ್ಥಿಸಿದರು. ಫಾತಿಮತ್‌ ಸಾನಿದ ಸ್ವಾಗತಿಸಿದರು. ಜ್ಯೋತಿ ಕೆ ವಂದಿಸಿದರು. ಫಾತಿಮಾ ಸುಹೈರಾ ಕಾರ್ಯಕ್ರಮ ನಿರೂಪಿಸಿದರು. 

ಕಾಲೇಜಿನ ಸ್ನಾತಕೋತ್ತರ ಗಣಕವಿಜ್ಞಾನ ವಿಭಾಗದ ಸಂಯೋಜಕರಾದ ಗೋವಿಂದ ಪ್ರಕಾಶ್‌, ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ, ರಮ್ಯ ಎಸ್‌ ಹಾಗೂ ಸುರಕ್ಷಾ ಎಸ್ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.