ಮಂಗಳೂರು: ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ರಾಲ್ಫ್ ರೋಶನ್ ಕ್ರಾಸ್ತಾ ಇವರಿಗೆ ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ ಕೊಡ ಮಾಡುವ  2024 ನೇ ಸಾಲಿನ ಕಲಾಕಾರ್ ಪುರಸ್ಕಾರ  ಘೋಷಿಸಲಾಗಿದೆ.

ಬೇಳ ಮೂಲದ ಪ್ರಸ್ತುತ ಮಂಗಳೂರಿನ ಕೆಲರಾಯ್ ಇಲ್ಲಿ ವಾಸ್ತವ್ಯ ಇರುವ ರೋಶನ್ ಇವರು ಸಂತ ಎಲೋಶಿಯಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಸಣ್ಣ ಪ್ರಾಯದಲ್ಲೇ ಗಿಟಾರ್ ಮೇಲೆ ಪ್ರೀತಿ ಬೆಳೆಸಿದ ಇವರು ಸ್ವ ಪರಿಶ್ರಮದಿಂದ ಗಿಟಾರಿನಲ್ಲಿ ಪ್ರಾವೀಣ್ಯ ಪಡೆದರು. ಹಲವಾರು ಸಂಗೀತ ತಂಡಗಳಲ್ಲಿ ಸಕ್ರೀಯ ಸದಸ್ಯರಾಗಿ ದುಡಿದಿದ್ದಾರೆ. ಸಂಗೀತಗಾರರಾದ ಹೆನ್ರಿ ಡಿಸೋಜ, ಲೊರ್ನಾ, ವಿಕ್ಟರ್ ಕೊನ್ಸೆಸೊ, ಮೆಲ್ವಿನ್ ಪೆರಿಸ್, ಮಿಕ್ ಮ್ಯಾಕ್ಸ್, ರೋಶನ್ ಬೆಳ್ಮಣ್, ಲೊಯ್ಡ್ ರೇಗೊ, ಪ್ರಜೋತ್ ಡೆಸಾ ಹಾಗೂ ಇತರರ ಸಂಗೀತ ರಸಮಂಜರಿಗಳಲ್ಲಿ ಲೀಡ್ ಗಿಟಾರ್ ನುಡಿಸಿದ್ದಾರೆ.

ಕರ್ನಾಟಕ ಮತ್ತು ಗೋವಾದ ಯುವ ಗಾಯಕರಿಗಾಗಿ ಆಯೋಜಿಸಿದ `ಸೋದ್ – 5 ಮ್ಯಾಂಗೋವಾ’ ಗಾಯನ ಟಿವಿ ರಿಯಾಲಿಟಿ ಶೋ ಇದರ ಸಂಗೀತ ನಿರ್ದೇಶಕರಾಗಿ ದುಡಿದಿದ್ದಾರೆ.  ಹಲವಾರು ಧ್ವನಿಸುರುಳಿಗಳಿಗೆ, ವಿಡಿಯೊ ಹಾಡುಗಳಿಗೆ ಸಂಗೀತ ರಚಿಸಿದ್ದಾರೆ. ಕೆಲವು ಹಾಡುಗಳನ್ನು ಬರೆದು ಸ್ವರ ಸಂಯೋಜಿಸಿದ್ದಾರೆ. ಕೊಂಕಣಿ ಸಂಗೀತದ ಶ್ರೇಷ್ಟತೆಗಾಗಿ ಅವರು ಹಾಕುವ ಶ್ರಮ, ಶ್ರದ್ಧೆ, ನಿಷ್ಟೆ ಹಾಗೂ ಹೊಸಬರಿಗೆ ಕಲಿಸುವ ಆಸಕ್ತಿ ಇವೆಲ್ಲವನ್ನೂ ಗಮನಿಸಿ ಸಮಿತಿಯು ಅವರ ಆಯ್ಕೆ ಮಾಡಿದೆ.

2024 ನವೆಂಬರ್ 03 ರಂದು ಭಾನುವಾರ ಸಾಯಂಕಾಲ 6.00 ಗಂಟೆಗೆ ಕಲಾಂಗಣದಲ್ಲಿ ನಡೆಯುವ 275 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ರು. 50,000/-, ಸನ್ಮಾನ ಪತ್ರ, ಸ್ಮರಣಿಕೆ ಒಳಗೊಂಡ 20 ನೇ  ಕಲಾಕಾರ್ ಪುರಸ್ಕಾರ ಹಸ್ತಾಂತರ ಮಾಡುವರು. ಮುಂಬಯಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಜಾನ್ ಡಿಸಿಲ್ವಾ ಕಾರ್ಕಳ ಮುಖ್ಯ ಅತಿಥಿಯಾಗಿ ಹಾಗೂ ಮಸ್ಕತ್ ಅನಿವಾಸಿ ಉದ್ಯಮಿ ಸ್ಟ್ಯಾನ್ಲಿ ಫೆರ್ನಾಂಡಿಸ್ ಗೌರವ ಅತಿಥಿಯಾಗಿ ಉಪಸ್ಥಿತರಿರುವರು. ನಂತರ ಗೋವಾದ ಪಿಯೊ ಆಗ್ನೆಲ್ಲೊ ಮತ್ತು ತಂಡದಿಂದ `ಗೊಂಯ್ಚೆಂ ದಾಯ್ಜ್’ ಸಂಗೀತ ರಸಮಂಜರಿ ನಡೆಯಲಿದೆ.

ಕೊಂಕಣಿ ಪ್ರದರ್ಶನ ಕಲೆಗಳ ಕಲಾವಿದರನ್ನು ಗೌರವಿಸಲು 2005 ನೇ ಇಸವಿಯಲ್ಲಿ ಕೊಂಕಣಿ ಭಾಷಾ ತಜ್ಞ ಡಾ ಪ್ರತಾಪ್ ನಾಯ್ಕ್ ಇವರ ಕಾರ್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಹೆಸರಲ್ಲಿ ಈ ಪುರಸ್ಕಾರವನ್ನು ಸ್ಥಾಪಿಸಲಾಗಿತ್ತು. 

ಇದುವರೆಗೆ ಅರುಣ್‍ರಾಜ್ ರೊಡ್ರಿಗಸ್ (ನಾಟಕ), ಜೊಯೆಲ್ ಪಿರೇರಾ (ಸಂಗೀತ), ಹ್ಯಾರಿ ಡಿಸೊಜಾ (ಬ್ರಾಸ್ ಬ್ಯಾಂಡ್), ವಂ ಚಾರ್ಲ್ಸ್ ವಾಸ್ (ಭಕ್ತಿ ಸಂಗೀತ), ಅನುರಾಧಾ ಧಾರೇಶ್ವರ್ (ಸಂಗೀತ), ಸಂತ ಭದ್ರಗಿರಿ ಅಚ್ಯುತದಾಸ್ (ಹರಿಕಥಾ), ಜೇಮ್ಸ್ ಲೊಪಿಸ್ (ಬ್ರಾಸ್ ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ಸಂಗೀತ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ), ರೋಶನ್ ಡಿಸೋಜ (ಸಂಗೀತ), ಕ್ರಿಸ್ಟೋಫರ್ ಡಿಸೋಜ (ನಾಟಕ), ಆವಿಲ್ ಡಿಕ್ರೂಜ್ (ನೃತ್ಯ), ಗೋಪಾಲ ಗೌಡ (ಜನಪದ), ಡೊಲ್ಲಾ ಮಂಗ್ಳುರ್ (ನಾಟಕ), ಐರಿನ್ ರೆಬೆಲ್ಲೊ (ವೊವಿಯೊ-ವೇರ್ಸ್), ಅನಿತಾ ಡಿಸೋಜ (ಗಾಯನ), ನಿಹಾಲ್ ತಾವ್ರೊ (ಗಾಯನ), ಮೆಲ್ವಿನ್ ಪೆರಿಸ್ (ಸಂಗೀತ), ಆಪೊಲಿನಾರಿಸ್ ಡಿಸೋಜ (ಸಂಗೀತ) ಇವರಿಗೆ ಈ ಪುರಸ್ಕಾರ ಲಭಿಸಿದೆ.