ಉಡುಪಿ: ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಕೊಯ್ಲೋತ್ತರ ಘಟಕಕ್ಕೆ ಮೂಲ ಸೌಕರ್ಯ ಕಲ್ಪಿಸಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು, ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲ ಆಗುವಂತೆ ಹಾಗೂ ಎಣ್ಣೆಕಾಳು ಬೆಳೆ ಉತ್ತೇಜಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಎಣ್ಣೆಕಾಳು ಕೊಯ್ಲೋತ್ತರ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳಾದ ಎಣ್ಣೆ ತೆಗೆಯುವ ಯಂತ್ರ, ಆಯಿಲ್ ಫಿಲ್ಟರ್, ಡಿಕಾರ್ಟಿಕೇಟರ್, ಆಯಿಲ್ ಪಿಲ್ಲಿಂಗ್ ಮೆಷಿನ್, ಆಯಿಲ್ ಕೇಕ್ ಕಟ್ಟಿಂಗ್ ಮಿಷನ್ ಇತ್ಯಾದಿಗಳನ್ನು ಖರೀದಿಸಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು, ರೈತ ಉತ್ಪಾದಕ ಸಂಘಗಳು ವಿಸ್ತ್ರತ ಯೋಜನಾ ವರದಿಯೊಂದಿಗೆ ಸೆಪ್ಟಂಬರ್ 4 ರ ಒಳಗಾಗಿ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನಾ ವರದಿಯ ಶೇ. 33 ರಷ್ಟು ಅಥವಾ ರೂ. 9.99 ಲಕ್ಷ ಮೀರದಂತೆ ಸಹಾಯಧನ ಒದಗಿಸಲಾಗುವುದು. ಈ ಘಟಕದಲ್ಲಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.