ಮಂಗಳೂರು:- 2ಎ ಎಂದರೆ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು; ಅವರು ಮೀಸಲಾತಿಯ‌ ಲಾಭ‌ ಪಡೆಯದಂತೆ ಬಿಜೆಪಿ 2ಎ‌ ಬಗೆಗೆ ಬೇಡಿಕೆ ಮಂಡಿಸುವಂತೆ ಹಲವರು ಮುಂದೆ ಬಂದಿರುವ ‌ಸ್ಥಿತಿ ತಂದಿದೆ ಎಂದು ಮಾಜೀ‌ ಮಂತ್ರಿ ಯು. ಟಿ. ಖಾದರ್ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುಟಿಕೆ ಅವರು ಚುನಾವಣೆ ಕಾಲದಲ್ಲಿ ಎಲ್ಲರಿಗೂ ಮೀಸಲಾತಿಯ ಸುಳ್ಳು ಭರವಸೆ ನೀಡಿ ಬಿಜೆಪಿ ನಾನಾ ಜನಾಂಗದವರು ಇಂದು ಬೀದಿಗಿಳಿದು ಮೀಸಲಾತಿ ಒತ್ತಾಯ ಇಡುವ ಸ್ಥಿತಿ ತಂದಿದೆ. ಆ ಮೂಲಕ ಹಿಂದುಳಿದ ವರ್ಗದವರ ಇರುವ ಮೀಸಲಾತಿ ಬರಿದು ಮಾಡುವ ಹುನ್ನಾರವನ್ನು ಬಿಜೆಪಿ ನಡೆಸಿದೆ‌ ಎಂದು ಖಾದರ್ ಹೇಳಿದರು.

ಎರಡೂವರೆ ಲಕ್ಷ ಸರಕಾರಿ ಹುದ್ದೆ ನೇಮಕಾತಿ ಆಗಬೇಕಿತ್ತು. ಅದು ಆಗಿದ್ದರೆ ಮೀಸಲಾತಿ ವರ್ಗದವರಿಗೆ‌ ಸ್ವಲ್ಪವಾದರೂ ಕೆಲಸ ದೊರೆಯುತ್ತಿತ್ತು. ಆದರೆ ತಮಗೆ ಬೇಕಾದವರನ್ನು ಬಿಜೆಪಿ ಜನ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಮೀಸಲಾತಿಯಿಂದಲಾದರೂ ಕೆಲಸ ಪಡೆಯುವ ಜನಾಂಗಗಳಿಗೆ ವಂಚನೆ ಆಗಿದೆ. ನಮ್ಮ ಜಿಲ್ಲೆಯಲ್ಲಿ 2ಎಯಲ್ಲಿ ಬಿಲ್ಲವ, ಕುಲಾಲ, ಗಟ್ಟಿ, ಕೋಟೆ, ಆಚಾರಿ, ಸಫಲಿಗ ಮೊದಲಾದವರು ಬರುತ್ತಾರೆ. ಈಗ ಸ್ಥಳೀಯ ಜನಾಂಗೀಯ ನಾಯಕರೇ 2ಎಯಲ್ಲಿ ಪಂಚಮಸಾಲಿ ಇಲ್ಲವೇ ಯಾರನ್ನೇ ಆಗಲಿ ಸೇರಿಸಬಾರದು ಎಂದು ಒತ್ತಾಯದ ಮನವಿ ಸಲ್ಲಿಸಬೇಕು ಎಂದು ಖಾದರ್ ಹೇಳಿದರು.

ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ದಲಿತರ ಸ್ಕಾಲರ್ಶಿಪ್ ಬರುತ್ತಿಲ್ಲ. ಮೆಟ್ರಿಕ್ ಮತ್ತು ಮೆಟ್ರಿಕ್ ಬಳಿಕದ ವಿದ್ಯಾರ್ಥಿಗಳು ಬಿಜೆಪಿ ಸರಕಾರ ಬಂದ ಮೇಲೆ ಸ್ಕಾಲರ್ಶಿಪ್ ಸಿಗದೆ ಕಲಿಕೆ ನಿಲ್ಲಿಸಬೇಕಾದ ಸ್ಥಿತಿ ಬಂದಿದೆ. ದೂರದ ಊರಿಂದ ಬಂದು ಓದುವ ಮಕ್ಕಳಿಗೆ ಹಾಸ್ಟೆಲ್ ಜಾಗ ಸಿಗದಾಗ ತಿಂಗಳಿಗೆ ರೂ. 1,000 ಕೊಡುವ ವಿದ್ಯಾಶ್ರೀ ಯೋಜನೆಯನ್ನು ಕಾಂಗ್ರೆಸ್ ಆರಂಭಿಸಿತ್ತು. ವಿದ್ಯಾರ್ಥಿಗಳು ಸೇರಿ ಮನೆ ಹಿಡಿದು ಓದುತ್ತಿದ್ದರು. ಬಿಜೆಪಿಯು ವಿದ್ಯಾಶ್ರೀ ನಿಲ್ಲಿಸಿ ಕಲಿಯುವ ಮಕ್ಕಳನ್ನು ಬೀದಿಗೆ ಬೀಳಿಸಿದೆ. ಪಿಎಚ್.ಡಿ. ಓದುವವರಿಗೆ ಅರಿವು ಯೋಜನೆಯನ್ನು ಕಾಂಗ್ರೆಸ್ ತಂದಿತ್ತು. ಅದರಂತೆ ಅವರು ಪ್ರತಿ ವರುಷ ರೂ. 25,000 ಪಡೆಯುತ್ತಿದ್ದರು. ಅವರು ಕೆಲಸ ಕೂಡ ‌ಬಿಟ್ಟಿದ್ದರು. ಈಗ ರೂ. 8,000 ಮಾತ್ರ ಕೊಟ್ಟರೆ ಅವರು ಪಿಎಚ್.ಡಿ. ಮಾಡುವುದು ಹೇಗೆ? ಬಿಜೆಪಿ ಕೆಲಸ ಮಾಡದೆ ಘೋಷಣೆ ಮಾಡುವ ಪಕ್ಷ ಎಂದು ‌ಖಾದರ್ ತಿಳಿಸಿದರು.

ವೆಚ್ಚ ಇಳಿಸಲು ಅನಗತ್ಯವಾಗಿ ನಿಗಮ ಹೆಚ್ಚು ಮಾಡಬಾರದಿತ್ತು. ಕೊರೋನಾಕ್ಕೆ‌ ಮಾಡಿದ ವೆಚ್ಚ ರೂ. 5,000 ಕೋಟಿ. 71,000 ಕೋಟಿ ಹೊಸ ಸಾಲ ಯಾಕೆ? ಕೇಂದ್ರ ಸರಕಾರ ಜಿಎಸ್ ಟಿ ಪಾಲು‌ ಕೊಟ್ಟಿಲ್ಲ. ಇಲ್ಲಿನ ಸಂಸದರು ಬಾಯಿ ಮುಚ್ಚಿಕೊಂಡಿರುವುದೇಕೆ? 2ಎ ಗೆ ಪಂಚಮಸಾಲಿ ಎಂದರೆ ಜಿಲ್ಲೆಯ ಬಹುಸಂಖ್ಯಾತರಾದ‌ ಬಿಲ್ಲವರು ಮತ್ತು ಇತರ ಜಾತಿಗಳವರಿಗೆ ಅನ್ಯಾಯವಾಗುತ್ತದೆ ಎಂದು ಗೊತ್ತಿದ್ದೂ ಇಲ್ಲಿನ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು  ಖಾದರ್ ಪ್ರಶ್ನಿಸಿದರು. 2ಎ ಮೀಸಲಾತಿ ವಿಷಯವನ್ನು ಸರಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಪರಿಶೀಲಿಸುವಂತೆ‌ ವಹಿಸಬೇಕಾಗಿತ್ತು. ಹಾಗೆ ಮಾಡದೆ ಯಡಿಯೂರಪ್ಪ ಸರಕಾರವು ಹೈ ಪವರ್‌ ಸಮಿತಿಯ ಅವಗಾಹನೆಗೆ ಬಿಟ್ಟಿರುವುದು ಎಲ್ಲರಿಗೂ ಮಾಡಿರುವ ವಂಚನೆ ಎಂದೂ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ ದಾಸ್, ಜಯರಾಜ್, ಹರೀಶ್ ರಾವ್ ಮೊದಲಾದವರು ಹಾಜರಿದ್ದರು.