ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪು ವರ್ಷಪೂರ್ತಿ ನಡೆಯಲಿರುವ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಅಪರಾಹ್ನ ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಡಾ. ಎಂ. ಮೋಹನ ಆಳ್ವರ ಸೊಸೆ ಗ್ರೀಷ್ಮಾ ವಿವೇಕ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ಉದ್ಯಮಿ, ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಕೆ. ಶ್ರೀಪತಿ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸರಣಿ ಸನ್ಮಾನ ಕಾರ್ಯಕ್ರಮದ ಪ್ರಥಮ ಸನ್ಮಾನವನ್ನು ಬಲಿಪ ಪ್ರಸಾದ ಭಾಗವತರ ದೀರ್ಘಕಾಲದ ಒಡನಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ, ಪಾವಂಜೆ ಮೇಳದ ಯಜಮಾನ ಮತ್ತು ಪ್ರಧಾನ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು. ಪಟ್ಲ ಸತೀಶ್ ಶೆಟ್ಟಿಯವರು ತಮ್ಮ ಮತ್ತು ಬಲಿಪ ಪ್ರಸಾದರ ಅಂತೆಯೇ ಬಲಿಪ ಕುಟುಂಬಸ್ಥರ ನಡುವಿನ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡರು. ಮಾರೂರು ಖಂಡಿಗ ವೇದಮೂರ್ತಿ ರಾಮದಾಸ ಆಸ್ರಣ್ಣ, ಜೈ ಕನ್ನಡಮ್ಮ ಪತ್ರಿಕೆಯ ಸಂಪಾದಕ ದೇವಿಪ್ರಸಾದ್, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸರಣಿ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಉಪಸ್ಥಿತರಿದ್ದರು. ಪತ್ರಕರ್ತ ಹರೀಶ್ ಕೆ. ಆದೂರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.