ಬಂಟ್ವಾಳ: ಸದೃಢ ದೇಹದಿಂದ ಸದೃಢ ದೇಶಕಟ್ಟಲು ಸಾಧ್ಯ. ವಿದ್ಯಾರ್ಥಿಜೀವನದಲ್ಲಿಯೇ ಕ್ರೀಡೆಗಳಲ್ಲಿ ತೊಡಗಿಕೊಂಡರೆ ದೈಹಿಕ ಹಾಗೂ ಮಾನಸಿಕವಾಗಿ ಸಬಲರಾಗಲು ಸಾಧ್ಯ. ವಿದ್ಯಾರ್ಥಿಗಳು ಯಾವುದಾದರೊಂದು ತಮ್ಮ ಆಸಕ್ತಿಯ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ನಿರಂತರ ಅಭ್ಯಾಸ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಕೀರ್ತಿಯನ್ನು ತರಬೇಕು. ದೇಶವನ್ನು ಪ್ರತಿನಿಧಿಸಿ ವಿಜಯಿಯಾದಾಗ ಸಿಗುವ ಸಂತೋಷ, ಹೆಮ್ಮೆ ಹಾಗೂ ಆತ್ಮತೃಪ್ತಿ ಬೇರಾವುದರಲ್ಲಿಯೂ ಸಿಗದು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ ನುಡಿದರು.
ಇವರು ಎಸ್.ವಿ.ಎಸ್. ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ. ಎಮ್ ರವರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವವನ್ನು ಬೆಳಸಿಕೊಳ್ಳಬೇಕು ಆಗ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಡ ಧೈರ್ಯದಿಂದ ಎದುರಿಸುವ ಮನಸ್ಥೈರ್ಯ ಬರುತ್ತದೆ ಎಂದು ತಿಳಿಸುತ್ತಾ ಕ್ರೀಡಾಪಟುಗಳಿಗೆ ಶುಭಕೋರಿದರು.
ಎಸ್.ವಿ.ಎಸ್.ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ.ರೇಖಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯು.ಎ.ಸಿ. ಸಂಯೋಜಕರಾದ ಡಾ.ಟಿ.ಕೆ.ರವೀಂದ್ರನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹೇಮಲತಾ, ಶಾಖಾಂಬರಿ ಪ್ರಾರ್ಥಿಸಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಶಿವಣ್ಣ ಪ್ರಭು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕರಾದ ಕಿಟ್ಟು ರಾಮಕುಂಜ ನಿರೂಪಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಪ್ರೀತ್ ಕಡಕೋಳ್ ವಂದಿಸಿದರು.