ಮಂಗಳೂರು: ರಾಜ್ಯ ಸರಕಾರ ನೌಕರರು ತಮ್ಮ ದೈನಂದಿನ ಒತ್ತಡಗಳ ನಡುವೆಯೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ ಹೇಳಿದರು.
ಅವರು ಗುರುವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರ ನೌಕರರ ಕ್ರೀಡಾಕೂಟದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಸರಕಾರಿ ನೌಕರಿಯು ಸಾರ್ವಜನಿಕ ಸೇವೆಗೆ ಒಂದು ಉತ್ತಮ ವೇದಿಕೆಯಾಗಿದೆ. ಬಡವರ, ದುರ್ಬಲರ ಸೇವೆ ಮಾಡಲು ಈ ವೃತ್ತಿಯನ್ನು ನಾವು ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕ್ರೀಡಾಕೂಟವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್ ಅವರು ಉದ್ಘಾಟಿಸಿದರು .ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ದೀಪ ಬೆಳಗಿಸಿದರು.
ವೇದಿಕೆಯಲ್ಲಿ ವೆನ್‍ಲಾಕ್ ಅಧೀಕ್ಷಕ ಡಾ. ಶಿವಕುಮಾರ್, ಸರಕಾರಿ ನೌಕರರ ಸಂಘದ ವಿವಿಧ ತಾಲೂಕು ಅಧ್ಯಕ್ಷರಾದ ಜಯರಾಜ್ ಜೈನ್ (ಬೆಳ್ತಂಗಡಿ), ಶಿವಾನಂದ ಆಚಾರ್ಯ(ಪುತ್ತೂರು), ವಿಮಲ್ ನೆಲ್ಯಾಡಿ (ಕಡಬ), ಶಿವಪ್ರಸಾದ್ ಶೆಟ್ಟಿ (ಬಂಟ್ವಾಳ), ದೊರೆಸ್ವಾಮಿ (ಮೂಡಬಿದ್ರೆ), ನಿತಿನ್ ಪ್ರಭು (ಸುಳ್ಯ) ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್‍ಕುಮಾರ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿ'ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಲತೇಶ್ ವಂದಿಸಿದರು. ಮೋಹನ್ ಶಿರ್ಲಾಲು ನಿರೂಪಿಸಿದರು.