ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಬೆಳುವಾಯಿ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಅನಧಿಕೃತ ಕಟ್ಟಡಕ್ಕೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ. ಮೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.

ಹರೀಶ್ ಸುವರ್ಣ ಎಂಬವರ ಮನೆ ನಂಬರ್ ಮತ್ತು ದಾಖಲೆಗಳನ್ನು ಬಳಸಿಕೊಂಡು ಚಂದ್ರಶೇಖರ್ ಎಂಬವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮೆಸ್ಕಾಂನ ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ಪಿಡಿಒ ಭೀಮ ನಾಯಕ್ ಮೆಸ್ಕಾಂನ ಅಕ್ಷರ್ ಪಾಟೀಲ್ ಅವರಲ್ಲಿ ಪ್ರಶ್ನಿಸಿದರು. ಮೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಒಂದು ವೇಳೆ ಸೂಕ್ತ ಕ್ರಮ ಆಗದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವುದೆಂದು ನಿರ್ಣಯಿಸಲಾಯಿತು. 

ಅಧ್ಯಕ್ಷ ಸುರೇಶ್ ಕೆ.ಗೋಲಾರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ನೀರಿನ ಬಿಲ್ಲು ಸಂಗ್ರಾಹಕರ ವಿಚಾರ, ಹೈವೇಯ ಅಸಮರ್ಪಕ ಕಾಮಗಾರಿ ಸಹಿತ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಚರ್ಚಿಸಿದರು. 

ಪಂಚಾಯಿತಿ ನೀರಿನ ಬಿಲ್ಲು ಸಂಗ್ರಹಕಾರರಾದ ಸುನಿಲ್ ಅವರ ಸಂಬಳ ಕಡಿತ ಕುರಿತಂತೆ ಸದಸ್ಯ ಭರತ್ ಶೆಟ್ಟಿ ಪ್ರಶ್ನಿಸಿದರು. ಕಳೆದ ಗ್ರಾಮ ಸಭೆಯಲ್ಲಿ ನಡೆಸಲಾದ ನಿರ್ಧಾರ ಕುರಿತಂತೆ ಕಾರ್ಯ ನಿರ್ವಹಿಸಿರುವುದಾಗಿ ಪಿಡಿಒ ತಿಳಿಸಿದರು. 

ಬೆಳುವಾಯಿಯ ಕಾನ ಪ್ರದೇಶದಲ್ಲಿ ನಡೆಸಲಾದ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ತಡೆ ಹಿಡಿದಿರುವುದರ ಕುರಿತು ಸದಸ್ಯ ಭರತ್ ಶೆಟ್ಟಿ ಹಾಗೂ ಅಧ್ಯಕ್ಷರ ನಡುವೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯೆ ಶುಭ ಸುರೇಶ್, ಸೂರಜ್ ಶೆಟ್ಟಿ, ಸೋಮನಾಥ್ ಕೋಟ್ಯಾನ್ ನಡುವೆ ಮಾತಿನ ಚಕಮಕಿ ನಡೆಯಿತು. 

ಮುಡಾಯಿಕಾಡು ಕಾಡುಮನೆ ಪ್ರದೇಶದಲ್ಲಿ ಬಹಳ ಬೇಡಿಕೆ ಇರುವ ರಸ್ತೆಗೆ ಎರಡು ವರ್ಷಗಳ ಹಿಂದೆ ಜಲ್ಲಿ ತಂದು ಹಾಕಿದರೂ, ಕಾಮಗಾರಿ ನಡೆದಿಲ್ಲ. ಇದರಿಂದ ಈ ಪ್ರದೇಶದಲ್ಲಿ ವಾಹನ ಓಡಾಟ ಅಸಾಧ್ಯವಾಗಿದೆ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದರು. ಅಕ್ಟೋಬರ್ ತಿಂಗಳೊಳಗಡೆ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗುವುದೆಂದು ಪಿಡಿಒ ತಿಳಿಸಿದರು.

ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಹಲವೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಗ್ರಾಮಸ್ಥರು, ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಾಗಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ, ಪರಿಹರಿಸಲಾಗುವುದು ಎಂದು ಡಿಬಿಎಲ್ ಕಂಪೆನಿಯ ಅಧಿಕಾರಿ ಬಾಲಾಜಿ ಭರವಸೆ ನೀಡಿದರು.

ಗ್ರಾಮಸಭೆಗೆ ಗ್ರಾಮಕರಣಿಕರು ಗೈರಾಗಿದ್ದು, ಸಭೆಗಳಿಗೆ ಕಡ್ಡಾಯವಾಗಿ ಗ್ರಾಮಕರಣಿಕರು ಅಥವಾ ಕಂದಾಯ ಇಲಾಖೆಯ ಪ್ರತಿನಿಧಿಗಳು ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. 

ಉಪಾಧ್ಯಕ್ಷ ಜಯಂತಿ, ಗ್ರಾಮ ಸಭೆ ನೋಡಲ್ ಅಧಿಕಾರಿ ಕೆ. ಪ್ರವೀಣ್, ಲೆಕ್ಕ ಸಹಾಯಕ ರಮೇಶ್ ಬಂಗೇರ, ಸದಸ್ಯರುಗಳು, ಇಲಾಖಾ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.