ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿಸದಸ್ಯ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ. ಅವರು ಎನ್‌ಎಸ್‌ಯುಐ ಮತ್ತು ಯು ಕಾಂಗ್ರೆಸ್‌ನಿಂದ ದುಡಿದ ಸಮರ್ಥ ಅಭ್ಯರ್ಥಿ. ಅವರ ಗೆಲುವು ನಮ್ಮ ಗೆಲುವು ಎಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ 16 ಬ್ಲಾಕ್ ಹಾಗೂ ಉಡುಪಿ ಜಿಲ್ಲೆಯ 10 ಬ್ಲಾಕ್‌ಗಳಲ್ಲಿ ಸಂಚರಿಸಿ ಬಂದಿದ್ದೇವೆ. ಅಲ್ಲೆಲ್ಲ ನಮ್ಮ ಅಭ್ಯರ್ಥಿ ಗುಡ್‌ವಿಲ್ ಸಂಪಾದಿಸಿದ್ದಾರೆ. ಪಂಚಾಯತ್ ರಾಜ್ ವಿಷಯದಲ್ಲಿ ಡಾಕ್ಟರೇಟ್ ಮಾಡಿದ ಭಂಡಾರಿ ಮಾದರಿಯ ಅಭ್ಯರ್ಥಿ ಇಡೀ ರಾಜ್ಯದಲ್ಲಿ ಬೇರೆ ಯಾರೂ ಇಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಬಿಜೆಪಿ ಪಂಚಾಯತ್ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದೂ ಅವರು ತಿಳಿಸಿದರು.

ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಮಾತನಾಡಿ ನನಗೆ ಕೊಟ್ಟ ಈ ಅವಕಾಶವು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಗಾಂಧೀಜಿಯವರು ಬಯಸಿದ ರೀತಿಯಲ್ಲಿ ಪಂಚಾಯತ್ ರಾಜ್ ಗಟ್ಟಿ ಗೊಳಿಸಲು ನಾನು ಸದಾ ಶ್ರಮಿಸುವೆ. ಪಂಚಾಯತ್ ರಾಜ್‌ಗೆ ಸಂವಿಧಾನ ಬದ್ದವಾಗಿ ಸಿಗಬೇಕಾದ ಅಧಿಕಾರ ಕೊಡಿಸಲು ನಾನು ಪ್ರಯತ್ನ ಮಾಡುತ್ತೇನೆ. ನಾನು ಈ ಕ್ಷೇತ್ರದ ಬಗೆಗೆ ಪೂರ್ವ ಸಿದ್ಧತೆ ಮಾಡಿಕೊಂಡು ಟಿಕೆಟ್ ಪಡೆದಿದ್ದೇನೆ. ನಮಗೆ 100 ರಷ್ಟು ಮತಗಳು ಕಡಿಮೆ ಇದ್ದು‌ ಅದನ್ನು ಇತರ 500ರಷ್ಟು ಸದಸ್ಯರಿಂದ ಪಡೆಯುವ ಭರವಸೆ ಇದೆ. ಆದ್ದರಿಂದ ಗೆಲುವು ಕಷ್ಟ ವಿಲ್ಲ ಎಂದು ಭಂಡಾರಿ ತಿಳಿಸಿದರು.