ಮೋದಿ ಸರಕಾರವು ಕಾರ್ಪೊರೇಟ್ ‌ಜನರ ಸುಪಾರಿ ಪಡೆದಿದ್ದು ಅವರಿಂದ ನಾಶವಾಗುತ್ತಿರುವ ಸಣ್ಣ ಉದ್ಯಮ, ಸಣ್ಣ ವ್ಯಾಪಾರ, ಯುವಕರ ಕೆಲಸ ಇವೆಲ್ಲ ದೇಶವನ್ನು ಕೆಟ್ಟ ಪತನದತ್ತ ನಡೆಸಿದೆ ಎಂದು ಎಐಸಿಸಿ ವಕ್ತಾರೆ ಡಾ. ಅಮೀ ಯಾಜ್ಞಿಕ್ ಹೇಳಿದರು.

ಅಮೆಜಾನ್ ಲಂಚ ಹಗರಣವು ಮೋದಿ ಸರಕಾರದ ಅತಿ ದೊಡ್ಡ ಹಗರಣಗಳಲ್ಲಿ ಒಂದಾಗಿದೆ. 8,546 ಕೋಟಿ ರೂಪಾಯಿಗಳನ್ನು ಕಾನೂನು ಶುಲ್ಕವಾಗಿ ನೀಡಿದ್ದು ಏಕೆ? ಪಾರದರ್ಶಕ ಆಡಳಿತದ ಸುಳ್ಳಿನ ಸರಕಾರವು ವಿದೇಶಿ ಸರಕಾರಗಳಿಂದ ಸಹ ಲಂಚ ಪಡೆಯುತ್ತಿದೆ ಎಂದು ಯಾಜ್ಞಿಕ್‌ ಹೇಳಿದರು.

ಏಳು ವರುಷಗಳಿಂದ ಮೋದಿ ಸರಕಾರವು ದೇಶವು ದೇಶಕ್ಕೆ ಒಂದು ಪೈಸೆ ನೀಡದಿದ್ದರೂ ಎಲ್ಲವನ್ನೂ ಕಾಸಗಿಗೆ ಮಾರುತ್ತ ಸರಕಾರದ್ದು ಏನೂ ಇಲ್ಲದಂತೆ ಮಾಡಿದ್ದೀರಿ. ಮುಂದಿನ ತಲೆಮಾರಿಗೆ ನೀವು ಏನು ಉಳಿಸಿದ್ದೀರಿ, ನೀಡುತ್ತೀರಿ ಎಂದು ಅಮೀ ಅವರು ಪ್ರಶ್ನಿಸಿದರು.

ಕಳೆದ ಏಳು ವರುಷಗಳಿಂದ ದೇಶದಲ್ಲಿ 14,00,00,000 ಉದ್ಯೋಗಗಳು ನಷ್ಟವಾಗಿದೆ. ಯುವಕರಿಗೆ ಬರೇ ಘೋಷಣೆ ನೀಡಿದರೆ ಸಾಕೆ? 8,546 ಕೋಟಿ ರೂಪಾಯಿ ಲಂಚವನ್ನು ಯಾವ ರಾಜಕಾರಣಿ, ಅಧಿಕಾರಿ ಪಡೆದರು? ಅಮೆಜಾನ್‌ಗೆ ಅನುಕೂಲ ಆಗುವಂತೆ ನಿಯಮಗಳನ್ನು ಸಡಿಲಿಸಲು ಈ ಲಂಚ ಪಡೆಯಲಾಯಿತೆ? ಅಮೆಜಾನ್ 6 ಕಂಪೆನಿಗಳಾಗಿದ್ದು, ಅವುಗಳ ಒಳ ಒಪ್ಪಂದಗಳೇನು? ಈ ಮೂರು ಪ್ರಶ್ನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಕೂಡಲೆ ಉತ್ತರಿಸಬೇಕು ಎಂದು ಅಮೀ ಹೇಳಿದರು.

ಮೋದಿಯವರು ಇಂಥ ಸಣ್ಣ ವ್ಯಾಪಾರಿಗಳನ್ನು ಕೊಲ್ಲುವ ಉದ್ಯಮಿಗಳಿಗೆ ಯಾಕೆ ಆತ್ಮ ನಿರ್ಭರ ಭಾರತ ಎನ್ನುತ್ತ ಅಪರಾಧ ಆಗುವಂಥ ನಿಯಮ ಮಾಡುತ್ತಿದ್ದಾರೆ? ಇಷ್ಟೊಂದು ವಿದೇಶಿ ಕಂಪನಿಗೆ ಮಣೆ ಹಾಕಿದ್ದು ದೇಶದ ಆಂತರಿಕ ಭದ್ರತೆಗೂ ಹಾನಿಕರವಲ್ಲವೆ? ಪತ್ರಕರ್ತರನ್ನು ಎದುರಿಸದ ಮೋದಿಯವರು ಕೂಡಲೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೂಲಕವೇ ಇಂತಹ ಲಂಚದ ಬಗೆಗೆ ತನಿಖೆ ನಡೆಸುವರೆ? ಒಂದು ವಿದೇಶಿ ಕಂಪನಿಗಾಗಿ ದೇಶದ ನಿಯಮ ತಿದ್ದುವ ಪ್ರಧಾನಿಯ ಬಗೆಗೆ ಜನರೇ ತೀರ್ಮಾನ ಮಾಡಬೇಕು ಎಂದು ಅಮೀ ಯಾಜ್ಞಿಕ್‌ ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಕ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಿ. ವಿ. ಮೋಹನ್ ಆರೀಫ್ ಬಾವಾ, ಸದಾಶಿವ ಉಳ್ಳಾಲ, ಟಿ. ಕೆ. ಸುಧೀರ್, ಲಾರೆನ್ಸ್, ಜೋಕಿಂ, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.