ಪೂರ್ವ ಪ್ರಾಥಮಿಕ ಮಟ್ಟದಿಂದ ಎರಡನೇ ತರಗತಿಯವರೆಗೆ ಮೊದಲ ಐದು ವರ್ಷಗಳ ಶಿಕ್ಷಣವನ್ನು ಆಯಾಯ ರಾಜ್ಯಗಳ ಮಾತೃಭಾಷೆಯಲ್ಲಿ, ಕರ್ನಾಟಕದಲ್ಲಿ ಕನ್ನಡದಲ್ಲೇ ಮಕ್ಕಳಿಗೆ  ಶಿಕ್ಷಣ ನೀಡಬೇಕೆಂದು ಆದೇಶಿಸಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ನಿರ್ದೇಶನ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿರುವರು.

ಇದು ನಮ್ಮ ಬಹು ದಿನಗಳ ಕನಸಾಗಿತ್ತು, ಈ ಹಿಂದೆ ಬಿ.ಎಂ ಇದಿನಬ್ಬ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಮಾತ್ರವಲ್ಲ ಸಿದ್ಧಲಿಂಗಯ್ಯನವರ ಕಾಲಾವಧಿಯಲ್ಲೂ ಈ ಕುರಿತು ಕೇಂದ್ರೀಯ ಶಿಕ್ಷಣ ಮಂಡಳಿಗೆ ಕನ್ನಡಿಗರ ಪರವಾಗಿ ತಮ್ಮ ಒತ್ತಾಸೆಯನ್ನು ವ್ಯಕ್ತಪಡಿಸಿರುವುದನ್ನು ಕಲ್ಕೂರ ಸ್ಮರಿಸಿಕೊಂಡಿರುವರು.

ಮಾತೃಭಾಷೆ ಹಾಗೂ ಮಾತೃ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಇದೊಂದು ಉತ್ತಮ ನಿಲುವು ಆಗಿದ್ದು ದೇಶದ ಸಂಸ್ಕೃತಿ ಹಾಗೂ ಮಾತೃಭಾಷೆಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದಿರುವರು. ರಾಷ್ಟ್ರದಾದ್ಯಂತ ನೆಲೆಸಿರುವ ಕನ್ನಡಿಗರ  ಸಹಿತ ಪ್ರತಿಯೊಬ್ಬರೂ ಈ ಆದೇಶವನ್ನು ಸಂಭ್ರಮಿಸುವರು ಎಂದು ಕಲ್ಕೂರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.