profession ಅಥವಾ ವೃತ್ತಿ ಬದುಕು ಪ್ರತಿಯೊಬ್ಬರಿಗೂ ಎಷ್ಟು ಮುಖ್ಯ ? ಆರ್ಥಿಕ ಸ್ವಾತಂತ್ರ್ಯವೆಷ್ಟು ಮುಖ್ಯ ? ಜೀವನಕ್ಕೆ ಹಣ ಬೇಕೆ ಬೇಕು. ಆದರೆ ಹಣ ಗಳಿಸುವುದೇ ಜೀವನದ ಗುರಿ ಆಗಬಾರದು ಎನ್ನುವ ವೇದಾಂತವನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಇದು ನಿಜವೂ ಹೌದು. ಬದುಕು ಒಂದು ಹಂತಕ್ಕೆ ಬಂದ ನಂತರ, ಇದು ಅರ್ಥವಾಗುತ್ತ ಹೋಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಅಲೆಯುವವರಿಗೆ ಈ ಒಣನೀತಿಗಳೆಲ್ಲ ಸಾರಹೀನ. ಇರಲಿ, ಇದು ಕೆಲವರಿಗೆ ಮಾತ್ರ ಅರ್ಥವತ್ತಾದ ವಿಷಯ ಅನ್ನಿಸಬಹುದು. ಆದರೆ ಎಲ್ಲರೂ ದುಡಿಯುವ ಉಮೇದಿನಲ್ಲೇ ಕೆಲಸಕ್ಕೆ ಹೋಗುವ ನಿರ್ಧಾರ ಮಾಡುತ್ತಾರ ? ಕೆಲವರಿಗೆ ತಮ್ಮ ವೃತ್ತಿ ಬದುಕು ಪ್ಯಾಷನ್ ಮತ್ತೆ ಕೆಲವರಿಗೆ ಫ್ಯ‍ಾಷನ್. ವೈಯಕ್ತಿಕ ಆಸಕ್ತಿಗಳು ಪ್ರತಿಯೊಬ್ಬರದ್ದೂ ವಿಭಿನ್ನವಾಗಿರುತ್ತವೆ. ಆದರೆ ‍ತಮ್ತಮ್ಮ ವೈಯಕ್ತಿಕ ಆಸಕ್ತಿಕರ ವಿಷಯಗಳನ್ನು ವೃತ್ತಿ ಬದುಕಾಗಿ ರೂಪಿಸಿಕೊಳ್ಳುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಕಾರಣಗಳು ಅನೇಕವಿರಬಹುದು. ಹುಡುಗರ ಪಾಲಿಗೆ, ಕುಟುಂಬದ ಜವಾಬ್ದಾರಿಗಳ ಹೊರೆ ಅಥವಾ ಮತ್ಯಾವುದೋ ಅನಿವಾರ್ಯತೆಗೆ ಕಟ್ಟುಬಿದ್ದು ಆಯ್ಕೆಗಳು ಕವಲೊಡೆಯಬಹುದು. ಆದರೂ ತಮ್ಮ ಆಸಕ್ತಿಗಳನ್ನು ಸ್ವಂತವಾಗಿಸಿಕೊಳ್ಳುವ ಹಾದಿ, ಹೆಚ್ಚು ಸಲೀಸಾಗಿ ತೆರೆದುಕೊಳ್ಳುವುದು ಹುಡುಗರಿಗೆಯೆ ಎನ್ನುವುದು ಎಷ್ಟು ಸತ್ಯವೊ, ಹೆಣ್ಣುಮಗಳೊಬ್ಬಳು ತನ್ನ ಗುರಿ ತಲುಪಲು ಸಮಾಜದ ನಡುವೆ ಹೆಚ್ಚು ಸೆಣೆಸಬೇಕಿರುವುದೂ ಅಷ್ಟೇ ಸತ್ಯ !.

ಹುಟ್ಟಿನಿಂದಲೇ ಮಗನೊಬ್ಬನಿಗೆ, ನೀನು ಚೆನ್ನಾಗಿ ಓದಿ ಡಾಕ್ಟರ್/ ಇಂಜಿನಿಯರ್ / ಪೋಲಿಸ್ ಅಥವಾ ಮತ್ಯಾವುದೊ, ವೃತ್ತಿಯಲ್ಲಿ ನೆಲೆನಿಂತು ಹೆಚ್ಚು ಸಂಪಾದಿಸಬೇಕು. ಹೆಸರು ಸಾಧಿಸಬೇಕು, ವಂಶದ ಕೀರ್ತಿ ಪತಾಕೆಯನ್ನು ಹಬ್ಬಿಸಬೇಕು ಎಂದೆಲ್ಲಾ ಹುರಿದುಂಬುವ ಪೋಷಕರು, ತಮ್ಮದೇ ಹೆಣ್ಣುಮಗಳಿಗೆ, ನೀನು ಒಳ್ಳೆಯ ಕಲೆಯಲ್ಲಿ ಪರಿಣಿತಿ ಸಾಧಿಸು, ಓದಿ ನಿನ್ನ ಆಯ್ಕೆಯ ಕ್ಷೇತ್ರದ ಸಾಧನೆಯಲ್ಲಿ ತೊಡಗಿಸಿಕೊ, ಎಂದು ಹೇಳುವುದನ್ನು ಮಾತ್ರ ಮರೆಯುತ್ತಾರೆ ಏಕೆ !?. ಮಗ ಸಾಧನೆ ಮಾಡಿದರೆ ಮಾತ್ರ ಹೆಮ್ಮೆಯ ವಿಷಯ, ಮಗಳು ಹೊಸ್ತಿಲು ದಾಟಿದರೆ ಮಾತ್ರ ಮರ್ಯಾದೆಗೇಡು ಅಲ್ಲವ !?. ಮಗ ಸಂಪಾದಿಸಿ ತಂದರೆ ಅಭಿಮಾನ. ಮಗಳು ಸಂಪಾದಿಸಿದರೆ ಬಿಗುಮಾನ. 'ಆಕೆ ದುಡಿದು ಯಾರನ್ನು ಸಾಕಬೇಕಿದೆ. ಆರಾಮವಾಗಿ ಮನೆಕೆಲಸ ಮಾಡಿಕೊಂಡು ಮನೆಯಲ್ಲಿದ್ದರೆ ಸಾಕು ಎಂದು' ಹೇಳುತ್ತಲೆ ನಯವಾಗಿ ಕೊಳೆಸಿಹಾಕುವವರಿಗೇನು ಬರವಿಲ್ಲಿ. ಮನೆಕೆಲಸಗಳಲ್ಲಿ ಮುಳುಗಿ, ಕೂಳು ತಿನ್ನಲೂ ನೆಮ್ಮದಿಯಿರುವುದಿಲ್ಲ ಕೆಲವು ಹೆಣ್ಣುಮಕ್ಕಳಿಗೆ. ಹೀಗಿರುವಾಗ, 'ಯಾವಾಗಲೂ ಮನೆಯಲ್ಲೇ ಇರುತ್ತೀಯ. ಹೊರಗೆ ದುಡಿದು ಬಂದವರಿಗೆ ಸೇವೆ ಮಾಡಲೂ ಆಗದ' ಎಂದು ಮೂಗು ಮುರಿಯುವವರಿಗೂ ಕೊರತೆಯಿಲ್ಲ. ಮುಗಿಯದ ಮನೆಕೆಲಸದ ಚಾಕರಿಯೊಳಗೆ, 'ನಿನ್ನದೇನು ಮನೆಯಲ್ಲಿ ಆರಾಮದಾಯಕ ಕೆಲಸ' ಎನ್ನುವ ಬಿಟ್ಟಿ ಬಿರುದನ್ನೂ ಅಂಟಿಸುತ್ತಾರೆ.

ಹುಟ್ಟಿನಿಂದ ಗಂಡನ ಮನೆಗೆ ಹೊರಡುವವರೆಗೂ, ಹೀಗೆ ತನ್ನವರ ಮತ್ತೆ ಸಮಾಜದ ನಡುವೆ ಹೆಣಗಾಡುವುದಾದರೆ, ಗಂಡನ ಮನೆಗೆ ಹೊರಟ ನಂತರದ ಬದುಕು ಮತ್ತು ಹೆಗಲೇರುವ ಜವಾಬ್ದಾರಿಗಳದ್ದು ಇನ್ನೊಂದು ಸವಾಲು. 'ಗಂಡನ ಸೇವೆ ಮಾಡುತ್ತಾ, ಚೆನ್ನಾಗಿ ಮನೆ ನಡೆಸಿಕೊಂಡು ಹೋಗುತ್ತಾ, ಹೆತ್ತವರ ಹೆಸರು ಉಳಿಸಮ್ಮಾ', ಎಂದು ಮೊದಲೇ ತಲೆಗೊಂದಷ್ಟು ತುಂಬಿ ಗೊಂದಲ ಸೃಷ್ಟಿಸಿ ಕಳಿಸುವುದೊಂದು ಭಾಗ. ಎಲ್ಲಾ ಸೌಕರ್ಯಗಳು ಇದ್ದೂ ಅಥವಾ ಇಲ್ಲದೆಯೊ, ಪಂಜರದ ಗಿಳಿಯಂತೆ ಬದುಕುವುದು ಆಕೆ ಪಾಲಿಗೆ ದಕ್ಕುವ ಪುಣ್ಯ !. ಹೊಸ ಬದುಕು, ಹೊಸ ವಾತಾವರಣ, ಹೊಸ ಮುಖ ಮತ್ತು ವ್ಯಕ್ತಿತ್ವಗಳಿಗೆ ಹೊಂದಿಕೊಳ್ಳುತ್ತಾ, ತನ್ನ ವೈಯಕ್ತಿಕ ಆಸಕ್ತಿಗಳೆಡೆಗೆ ಗಮನ ಕೊಡುವುದು, ಬಹುಪಾಲು ಕಲ್ಲುಮುಳ್ಳಿನ ಹಾದಿಯೇ... ಈ ಎಲ್ಲದರ ನಡುವೆ, ಕೊಂಚ ಅರ್ಥ ಮಾಡಿಕೊಂಡು ವೇದನೆ ಭಾವನೆಗಳಿಗೆ ಸ್ಪಂದಿಸುವ ಪತಿರಾಯ ಸಿಕ್ಕರೆ ಅದೇ ದೊಡ್ಡ ಧನ್ಯತೆ ಆಕೆಗೆ. ಅಥವಾ, ಅವಳ ಭಾವಗಳಿಗೆ ಬರೆ ಎಳೆಯುವವನಾದರೆ, ಅಲ್ಲೂ ದೊಡ್ಡ ನಿರಾಸೆ ಮತ್ತು ನರಕವೆ ಅವಳ ಬಾಳು.

' ಕೆಲಸಕ್ಕೆ ಬೇಕಾದರೆ ಹೋಗು. ಆದರೆ ಮನೆಕೆಲಸಗಳನ್ನೂ ನೀನೆ ಸರಿದೂಗಿಸಿಕೊಂಡು ಹೋಗಬೇಕು. ನಾನಂತೂ ಕೈಜೋಡಿಸುವುದಿಲ್ಲ. ಕೆಲಸದಿಂದ ಸುಸ್ತೆಂದು ಬಂದು, ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಂತಿಲ್ಲ' ಎಂದು ಗದರಿ ಆಕೆಯ ಸ್ವಪ್ನಗಳನ್ನು ಮೂಲೆಗಟ್ಟುವವರೂ ಇದ್ದಾರೆ. ಗಟ್ಟಿತನವಿರುವ ಹೆಣ್ಣುಮಗಳಾದರೆ, ಅವರೆಲ್ಲರ ನಿಯಮಗಳಿಗೆ ಒಪ್ಪಿಯೂ, ತನ್ನ ಗಮ್ಯದೆಡೆಗೆ ನಡೆವ ಛಾತಿ ಬೆಳೆಸಿಕೊಳ್ಳುತ್ತಾಳೆ. ಆದರೆ ಮೊದಲೇ ಹುಟ್ಟಿನಿಂದ ಇಲ್ಲದ ಹೊರೆ ತಲೆಗೆ ತುಂಬಿ ದುರ್ಬಲರನ್ನಾಗಿಸಿದ್ದರೆ, ಆಕೆ ತನ್ನ ವೈಯಕ್ತಿಕತೆಯನ್ನೇ ಬಲಿಕೊಟ್ಟು, ತನ್ನ ಬದುಕು ಮತ್ತು ಈಡೇರದ ಕನಸುಗಳೊಟ್ಟಿಗೆ ಸಂಘರ್ಷ ಮಾಡುತ್ತಲೇ ಜೀವನ ಸವೆಸಿ ಹೈರಾಣಾಗುತ್ತಾಳೆ ಅಷ್ಟೇ. ‍ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವವರು ವಿರಳ. ಅರ್ಥವಾದರೂ ಜಾಣ ಕುರುಡರಂತಿರುವವರು ಬಹಳ !!. ಒಟ್ಟಾರೆ, ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂಬಂತೆ ಆಕೆಯ ಬದುಕು. ಇತ್ತ ಮನೆ ಮತ್ತು ಜವಾಬ್ದಾರಿಗಳನ್ನೂ ಕೈಬಿಡುವಂತಿಲ್ಲ. ಅತ್ತ ತನ್ನ ಕನಸುಗಳಿಂದ ಹೆಜ್ಜೆ ಹಿಂದಕ್ಕೆ ಕಿತ್ತಿಡಲೂ ಮನಸ್ಸು ಒಪ್ಪುವುದಿಲ್ಲ. ಮತ್ಯಾರೊ ಸುರಿದ ಆಯ್ಕೆಗಳು ಮತ್ತು ವೈಯಕ್ತಿಕ ಆಸಕ್ತಿಗಳ ನಡುವೆಯ ಹೊಯ್ದಾಟವೇ ಜೀವನ ಅವಳ ಪಾಲಿಗೆ. ಇದು ವಿಪರ್ಯಾಸವಲ್ಲ...ವಾಸ್ತವ !!.


_ಪಲ್ಲವಿ ಚೆನ್ನಬಸಪ್ಪ