ಕರಾವಳಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಡೆಯುವ ಓಟದ ಕೋಣಗಳ ಸ್ಪರ್ಧೆಯನ್ನು ಕಂಬಳ ಎನ್ನುತ್ತಾರೆ. ಕಂಬಳ ಕಂಬುಳ ಎಂದೂ ಜನರು ಇದನ್ನು ಕರೆಯುತ್ತಾರೆ. ರಾಜ್ಯದ ಕರಾವಳಿ ಭಾಗಕ್ಕೆ ಕಂಬಳ ಇಲ್ಲದಿದ್ದರೆ ಚಂದವೇ ಇಲ್ಲ, ಎಂದು ಗ್ರಾಮ್ಯ ಭಾಷೆಯಲ್ಲಿ ಹೇಳುವ ಪ್ರಭುಗಳು, ತುಳುನಾಡಿನ ಗಂಡು ಕಲೆಯಾಗಿರುವ ಯಕ್ಷಗಾನ ಜಾನಪದ ಕಲೆಯಾದರೆ, ಕಂಬಳ ಜಾನಪದ ಕ್ರೀಡೆ. ಯಕ್ಷಗಾನ ಮತ್ತು ಕಂಬಳ ತುಳುನಾಡಿನ ಹೆಸರಿನಲ್ಲಿ ಅಂಟಿಕೊಂಡಿದೆ . ಎರಡೂ ಶ್ರೇಷ್ಠ ಕಲೆಗಳು. ಈ ಎರಡೂ ಜಾನಪದ ಪ್ರಕಾರದಿಂದಲೇ ಕರಾವಳಿ ಭಾಗವು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಕುಂದಾಪುರದಿಂದ ಕಾಸರಗೋಡಿನವರೆಗೆ ಪಸರಿಸಿರುವ ತುಳುನಾಡಿನ ಕಂಬಳವು ಅಪಾರವಾದ ಜನಪ್ರಿಯತೆಯನ್ನು ಪಡೆದಿದೆ. ಕಾಲದ ದೃಷ್ಟಿಯಿಂದ ಕಂಬಳಗಳು, ದೀಪಾವಳಿಯ ಅನಂತರ ಆರಂಭವಾಗಿ ಶಿವರಾತ್ರಿಯ ಹೊತ್ತಿಗೆ ಮುಕ್ತಾಯವಾಗುತ್ತದೆ. ತುಳುವಿನ ಕಾಲಮಾನ ಪದ್ಧತಿಯಲ್ಲಾದರೆ ಜಾರ್ದೆ ತಿಂಗಳಿನಿಂದ ಸುಗ್ಗಿ ತಿಂಗಳ ಮಧ್ಯೆ ಜರಗುತ್ತದೆ. ಭತ್ತದ ಕೃಷಿಯನ್ನು ಗಮನದಲ್ಲಿರಿಸಿಕೊಂಡರೆ ಮೊದಲನೆ ಏಣೆಲ್ ಬೆಳೆ ಮುಗಿದು ಎರಡನೆಯದಾದ ಸುಗ್ಗಿ ಬೆಳೆಗೆ ಕೆಲಸ ಆರಂಭ ಮಾಡುವ ಕಾಲಘಟ್ಟವದು. ತುಳುನಾಡಿನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಪೂರ್ವ ಭಾಗದಲ್ಲಿ ಕಡಿಮೆ.
ಕಂಬಳ ಅನ್ನೋದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಕಂಬಳದಲ್ಲಿ ಜನಪದ ಸಂಸ್ಕೃತಿ ಮತ್ತು ದೈವರಾಧನೆಯ ಸಂಸ್ಕೃತಿಯೊಂದಿಗೆ ಮೇಳ್ವೆಸಿಕೊಂಡ ಸಾಂಪ್ರದಾಯಿಕ ಕಂಬಳ ಒಂದು ಬಗೆಯಾದರೆ ವೈಭವದಿಂದ ಸ್ಪರ್ಧಾತ್ಮಕವಾಗಿ ನಡೆಯುವ ಜೋಡುಕೆರೆ ಕಂಬಳ ಇನ್ನೊಂದು ಬಗೆ, ಕಂಬಳ ಎನ್ನುವುದು ಕೃಷಿಕರಿಗೆ ಸಂಪರ್ಕ ಕೊಂಡಿಯಾಗಿದೆ. ಎಲ್ಲಾ ಜಾತಿ, ಮತದವರು ಕಂಬಳದ ಕೋಣಗಳನ್ನು ಸಾಕುತ್ತಾರೆ. ಇದು ಜಾತಿಯೆಂಬ ಎಲ್ಲೆಯನ್ನು ಮೀರಿದ ಕ್ರೀಡೆಯಾಗಿದೆ. ಇಲ್ಲಿ ಎಲ್ಲರೂ ಸಮಾನರು. ಕಂಬಳದ ಕೋಣಗಳು ಹೇಳಿದ್ದನ್ನು ಕೇಳದಿದ್ದರೆ ಒಂದೆರಡು ಪೆಟ್ಟು ಕೊಡುತ್ತಾರೆ. ಆದರೆ ಪೆಟ್ಟು ಕೊಟ್ಟದ್ದಕ್ಕೆ ಪ್ರಾಯಶ್ಚಿತವಾಗಿ ಮಕ್ಕಳಿಗಿಂತಲೂ ಚೆನ್ನಾಗಿ ಆರೈಕೆ ಮಾಡುತ್ತಾರೆ. ಕೆಲವೊಂದು ಕಂಬಳದ ಮಾಲೀಕರು ಸ್ವಂತ ಮಕ್ಕಳನ್ನು ಕೂಡ ಅಷ್ಟೊಂದು ಪ್ರೀತಿಯಿಂದ ನೋಡಲಿಕ್ಕಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಕೋಣಗಳ ಮೈದಡವಿ, ನೀರು ಹಾಕಿ ಅದರೊಂದಿಗೆ ಹತ್ತರಿಂದ ಹದಿನೈದು ನಿಮಿಷ ಮಾತನಾಡಿಯೇ ಹೊಟ್ಟೆಗೆ ಆಹಾರ ತೆಗೆದುಕೊಳ್ಳುತ್ತಾರೆ. ಅವರ ಬದುಕಿನಲ್ಲಿ ಕಂಬಳದ ಕೋಣಗಳು ಎಂದರೆ ಮಕ್ಕಳಿಗೆ ಸಮಾನ. ಒಂದು ಕೋಣ ಸಾಕಲು ದಿನಕ್ಕೆ 500 ರಿಂದ 800 ರೂ ವರೆಗೆ ಖರ್ಚು ಇದೆ. ಹುರುಳಿ ಅರೆದು ಹಾಕಬೇಕು. ಸ್ವಲ್ಪ ಪ್ರಮಾಣದಲ್ಲಿ ಹುಲ್ಲು, ಒಣಹುಲ್ಲು, ವೈದ್ಯಕೀಯ ತಪಾಸಣೆ, ಎಣ್ಣೆಯಿಂದ ಮಾಲಿಶ್ ಮಾಡುತ್ತಾರೆ.ಒಂದು ಜೊತೆ ಕೋಣ ಸಾಕಲು ತಿಂಗಳಿಗೆ ಕನಿಷ್ಠ 15000 ರೂ ಇಂದ 20000 ರೂ ವರೆಗೆ ಖರ್ಚು ತಗಲುತ್ತದೆ. ಕೋಣಗಳ ಸಾಕಣೆ ಖರ್ಚಿಗಿಂತ ಕಂಬಳಕ್ಕೆ ಕರೆದೊಯ್ಯುವಾಗ ಆಗುವ ಖಚೆ 9 ಹೆಚ್ಚು. ಕೋಣಗಳ ಜೊತೆ 10-12 ಜನರು ಹೋಗಬೇಕು. ಒಬ್ಬರಿಗೆ ಕನಿಷ್ಠ ಒಂದು ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಕಂಬಳ ಎಂಬುದು ತುಳುನಾಡಿನ ಸಂಸ್ಕೃತಿ. ಇದೊಂದು ಪ್ರಾಚೀನ ಕಲೆ, ಇದು ನಿಲ್ಲಬಾರದು. ಯಕ್ಷಗಾನ ಮತ್ತು ಕಂಬಳ ನಮಗೆ ರಕ್ತಗತವಾಗಿ ಹಿರಿಯರಿಂದ ಬಂದ ಬಳುವಳಿ. ಇದನ್ನು ಉಳಿಸಿ ಬೆಳೆಸಿ, ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಂಬಳಕ್ಕೆ ಒದಗಿದ ಆರ್ಥಿಕ ಆಯಾಮವು ಅಧ್ಯಯನ ಯೋಗ್ಯವಾದದು. ಇವೆಲ್ಲವನ್ನು ಗಮನಿಸಿದರೆ ಕಂಬಳವು ಕೇವಲ ಓಟದ ಕೋಣಗಳ ಸ್ಪರ್ಧೆಯು ಅಲ್ಲ. ಜನಪದ ಮನರಂಜನ ಸಾಮಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ರಾಜಕೀಯ, ಆರ್ಥಿಕ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆ. ಈ ಲೇಖನದ ಉದ್ದೇಶವು ಅಷ್ಟೇ ಆಗಿದೆ.
- ನಿಶಾ ದೇವಾಡಿಗ. ಪಿ
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು