ಉಜಿರೆ: ಇಂದಿನ ಒತ್ತಡಮಯ ಜೀವನದಲ್ಲಿ ಮಕ್ಕಳು ಮೊಬೈಲ್ ಗಳ ದಾಸರಾಗಿದ್ದು ಅನೇಕ ಮಾನಸಿಕ ದೈಹಿಕರೋಗದಿಂದ ಬಳಲುತ್ತಿದ್ದು ಇದಕ್ಕೆ ಯೋಗ ಅಭ್ಯಾಸಗಳೇ ಅತ್ಯಂತ ಸಹಕಾರಿ ಹಾಗೂ ಎಲ್ಲಾ ರೀತಿಯ ಋಣಾತ್ಮಕ ವಿಕಿರಣಗಳನ್ನ ದೂರ ಮಾಡಲು ಈ ರೀತಿಯ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು ಅತೀವ ಅವಶ್ಯ ಎಂದು ಶ್ರೀ ಧ.ಮಂ.ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಎಂ .ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.
ಅಧ್ಯಕ್ಷ ಸ್ಥಾನ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಡಾ. ಪ್ರಶಾಂತ್ ಶೆಟ್ಟಿಯವರು ಮಾತನಾಡುತ್ತಾ ಮಕ್ಕಳ ಏಳ್ಗೆಗಾಗಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ದೂರ ದರ್ಶಿತ್ವದ ಫಲವಾಗಿ 70ರ ದಶಕದಿಂದಲೇ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪರಿಚಯ ಮತ್ತು ಪ್ರಚಾರ ನಿರಂತರ ನಡೆಯುತ್ತಿದೆ. ಮಕ್ಕಳಲ್ಲಿನ ದಿವ್ಯ ಶಕ್ತಿಯ ಜಾಗೃತಿಗಾಗಿ ನಡೆಯುತ್ತಿರುವ ಈ ಶಿಬಿರ ಅತ್ಯಂತ ಮಹತ್ವ ಪೂರ್ಣವಾಗಿದೆ ಎಂದು ಡಾ. ಪ್ರಶಾಂತ್ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಶಿಬಿರ ಮೂರು ದಿನಗಳ ಕಾಲ ನಡೆಯಲಿದ್ದು ಯೋಗ ಮತ್ತು ಪ್ರಕೃತಿಯ ಚಿಕಿತ್ಸೆಯ ಮೂಲತತ್ವವನ್ನು ಅರಿಯಲು ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಸಂಚಾಲಕರಾದ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಶಿಬಿರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸರ್ವರನ್ನೂ ಸ್ವಾಗತಿಸಿದರು.
ಪ್ರಕೃತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಹಾಗೂ ಉಪ ಪ್ರಾಚಾರ್ಯರಾದ ಡಾ. ಸುಜಾತ ದಿನೇಶ್ ವಂದನಾರ್ಪಣೆಗೈದರು. ಈ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರಾದ ಡಾ. ಪ್ರಶಾಂತ್ ಶೆಟ್ಟಿ ಅವರನ್ನು ಹಾಗೂ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಯೋಗ ವಿಭಾಗದಲ್ಲಿ ಸೇವೆಸಲ್ಲಿಸಿದ ಡಾ. ನಂದೀಶ್ ಅವರನ್ನೂ ಯೋಗ ವಿಭಾಗದ ವತಿಯಿಂದ ಸಮ್ಮಾನಿಸಲಾಯಿತು. ಶಿಬಿರದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳಿಂದ 150 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.