ಮೂಡುಬಿದಿರೆ: ಮೂಡುಬಿದಿರೆಯಾ ಪುರಸಭಾ ಸ್ವಚ್ಛ ಕಾರ್ಮಿಕರು ಸಾಕಷ್ಟು ಮುತುವರ್ಜಿಯಿಂದ ಇಡೀ ಮೂಡುಬಿದಿರೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಅತ್ತ ನಾಗರಿಕರಾಗಿದ್ದು, ಸಾಕಷ್ಟು ತಿಳುವಳಿಕೆ ಓದುಬರಹ ತಿಳಿದಿದ್ದು ಕೆಲವು ಫ್ಲಾಟ್ ಗಳಲ್ಲಿರುವ ಮತ್ತು ಸ್ವಂತ ಮನೆಗಳಲ್ಲಿರುವ ವ್ಯಕ್ತಿಗಳು ಕಂಡ ಕಂಡಲ್ಲಿ , ಸಂದಿಗೊಂದಿಗಳಲ್ಲಿ, ಮನೆಯ ಕಸ, ತ್ಯಾಜ್ಯ ಇತ್ಯಾದಿಗಳನ್ನು ತಂದು ಸುರಿಯುತ್ತಿದ್ದಾರೆ. ಪ್ರತಿ ಅಂಗಡಿಗಳಿಗೆ ಭೇಟಿ ಇತ್ತು ಕಸವನ್ನು ಸಂಗ್ರಹಿಸುತ್ತಿರುವ ಮೂಡುಬಿದಿರೆಯ ಪುರಸಭಾ ಸ್ವಚ್ಛ ಕಾರ್ಮಿಕರ ಕೆಲಸಕ್ಕೆ ಈ ಕೆಲವು ಮಂದಿ ಕೆಟ್ಟ ಹೆಸರನ್ನು ನೀಡುತ್ತಿದ್ದಾರೆ. ಇಂಥವರನ್ನು ಅನಾಗರಿಕರು ಎನ್ನಬಹುದೇ ? ಅಥವಾ ಅನಕ್ಷರಸ್ಥರು ಎನ್ನಬಹುದೇ ? ನೀವೇ ಹೇಳಿ.

ಬಸ್ಸು ನಿಲ್ದಾಣದಿಂದ ಸ್ವರಾಜ್ಯ ಮೈದಾನಕ್ಕೆ ಹೋಗುವ ಆಳ್ವಾಸ್ ಆಸ್ಪತ್ರೆಯ ರಸ್ತೆಯ ಬದಿಗಳಂತೂ ಇಂತಹ ಅನಾಗರಿಕರ ವರ್ತನೆಯಿಂದ ಕೊಳೆತು ನಾರುತ್ತಿದೆ. ಅದೇ ರೀತಿ ಇಂತಹ ಇನ್ನು ಕೆಲವು ಮಂದಿ ತಮ್ಮ ಮನೆಯ ಕಸ ಕೊಳಚೆ ಇತ್ಯಾದಿಗಳನ್ನು ಪುರಸಭೆ ವ್ಯಾಪ್ತಿಯಿಂದ ಹೊರಗಿನ ಪ್ರದೇ ಶಗಳಿಗೆ ವಾಹನಗಳಲ್ಲಿ ಕೊಂಡೊಯ್ದು ರಸ್ತೆ ಬದಿಗಳಲ್ಲಿ ಬಿಸಾಡುತ್ತಿರುವ ಬಗೆಗೂ ಹಲವಾರು ಮಂದಿ ದೂರುತ್ತಿದ್ದಾರೆ. ಕೆಲವಾರು ಮಂದಿ ಬೈಕುಗಳಲ್ಲಿ ಹೋಗುತ್ತಾ ಬಿಸಾಡಿದರೆ ಇನ್ನು ಕೆಲವು ಮಂದಿ ಕಾರು ಇತ್ಯಾದಿಗಳಲ್ಲಿ ಹೋಗುತ್ತಾ ಕಂಡಕಂಡಲ್ಲಿ ರಸ್ತೆಯ ಬದಿ ಎಸೆಯುತ್ತಿದ್ದಾರೆ. ಇದರಿಂದಾಗಿ ಮೂಡುಬಿದಿರೆಯನ್ನು ಸಂಪರ್ಕಿಸುವ ಹೆಚ್ಚಿನ ರಸ್ತೆಗಳ ಬದಿಗಳಲ್ಲಿ ಈ ರೀತಿ ಎಸೆದ ಕೊಳಚೆ ಕಶ್ಮಲಗಳು ಮಳೆಯ ಹೊಡೆತಕ್ಕೆ ಸಿಲುಕಿ ಶೇಖರಣೆಯಾಗಿದೆ.

ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.