ಮೂಡಬಿದಿರೆಯ ಪಳಕಳ ಪುತ್ತಿಗೆ ಮಸೀದಿ ಹೊಸತಾಗಿಸಲಾಗಿದ್ದು ಭಾನುವಾರ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಮರು ತೆರೆಯಿತು. ಈ ಸಂದರ್ಭದಲ್ಲಿ ಎಲ್ಲ ಧರ್ಮಗಳಿಗೆ ಸೇರಿದ ಅನಾರೋಗ್ಯ ಪೀಡಿತರಿಗೆ ಮತ್ತು ಕಡು ಬಡವರಿಗೆ ನೆರವು ನೀಡುವ ಕಾರ್ಯಕ್ರಮ ನಡೆಯಿತು.

ಮಸೀದಿಗೆ ಎಲ್ಲ ಧರ್ಮಗಳಿಗೆ ಸೇರಿದವರಿಗೆ ಪ್ರವೇಶವಿತ್ತು, ತೆರೆಯುವಿಕೆ ಸಭೆಯ ಸರ್ವ ಧರ್ಮೀಯರ ಮಿಲನವಾಗಿತ್ತು. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್ ಮಾತನಾಡಿ, ದೇವರೊಬ್ಬನೆ ನಾಮ ಹಲವು ಎಂದು ಹೇಳಿದರು.

ಪಕ್ಷಿಕೆರೆ ಸಂತ ಜೂದ ಇಗರ್ಜಿಯ ಧರ್ಮಗುರು ಮೆಲ್ವಿನ್ ನೊರೋನ್ಹಾ ಮಾತನಾಡಿ ಧರ್ಮ ಇರುವುದು ಸರ್ವರ ಹಿತಕ್ಕೆ, ಅದನ್ನು ದ್ವೇಷ ಸಾಧನೆಗೆ ಬಳಸಬಾರದು ಎಂದರು.

ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಶಾಸಕ ಅಭಯಚಂದ್ರ ಜೈನ್, ವಾರ್ತಾಭಾರತಿಯ ಅಬ್ದುಲ್ ಸಲಾಂ ಪುತ್ತಿಗೆ ಧರ್ಮ ಜನರಿಗಾಗಿ ಎಂದು ವಿವರಿಸಿದರು. ಮಸೀದಿಯ ಅಬುಲ್ ಅಲಾ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.