ಮಂಗಳೂರು: ಸಮಾಜದ ಅಭಿವೃದ್ಧಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಶ್ರೇಯಸ್ಸು ಲಭಿಸುತ್ತದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ನಗರದ ಓಶಿಯನ್‌ಪರ್ಲ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣಗೊಳಿಸಿ ಮಾತನಾಡಿದ ಅವರು ‘ ಸದಾ ಚಟುವಟಿಕೆಯಲ್ಲಿ ತೊಡಗಿ ಕೊಂಡಿರುವ ದ.ಕ. ಜಿಲ್ಲೆಯ ಪತ್ರಕರ್ತರ ಸಂಘ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಮಾಜಕ್ಕೆ ಮಾದರಿಯಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಪತ್ರಕರ್ತರ ಸಂಘದ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ‘ಹಿರಿಯ ಪತ್ರಕರ್ತರ ಆದರ್ಶದಲ್ಲಿ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಮುನ್ನಡೆಯುತ್ತಿದೆ. ಇಲ್ಲಿನ ಪತ್ರಕರ್ತರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಪರ ಕಾಳಜಿಯನ್ನು ತೋರಿಸುತ್ತಿದ್ದಾರೆ’ಎಂದರು.
ಮುಖ್ಯ ಅತಿಥಿಯಾಗಿದ್ದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ಪತ್ರಿಕೆಗಳು ಸಮಾಜದ ಮೇಲೆ ಬೀರುವ ಪರಿಣಾಮ ಮಹತ್ವದ್ದಾಗಿದೆ’ ಎಂದರು.
ಮಂಗಳೂರು ಪ್ರೆಸ್ ಕ್ಲಬ್‌ಅಧ್ಯಕ್ಷ ಪಿ.ಬಿ.ಹರೀಶ್ ರೈ, ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರಘುರಾಮ, ಆನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಹರ್ಷ, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಬದಲ್ಲಿ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅವಶ್ಯ ಸಾಮಾಗ್ರಿ ಹಾಗೂ ವೆನ್ಲಾಕ್ ಸಮುದಾಯ ವಾಚನಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸುವ ಸುವರ್ಣ ಸಂಭ್ರಮ ಚಟುವಟಿಕೆಗಳಿಗೆ ಸಾಂಕೇತಿಕ ಚಾಲನೆ ನೀಡಲಾಯಿತು. ಸುವರ್ಣ ಸಂಭ್ರಮ ಲೋಗೋ ವಿನ್ಯಾಸ ಮಾಡಿದ ಚಿತ್ರಕಲಾವಿದ ಜಾನ್‌ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.