ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮಂಗಳೂರು: ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕ ವ್ಯಾಜ್ಯ ವಿಲೇವಾರಿ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 12 ರಂದು ಬಲ್ಮಠ ಸರಕಾರಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಹಕ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಉಪನಿರ್ದೇಶಕಿ ಹೇಮಲತಾ ಮಾತನಾಡಿ ಮುಂದಿನ ಜನಾಂಗ ಗ್ರಾಹಕ ಹಕ್ಕುಗಳ ತಿಳುವಳಿಕೆ ಹೊಂದಲು ಗ್ರಾಹಕ ಶಿಕ್ಷಣದ ಅಗತ್ಯವಿದೆ ಎಂದರು. 

ಮುಖ್ಯ ಉಪನ್ಯಾಸ ನೀಡುತ್ತಾ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಎಂ ಜೆ ಸಾಲಿಯಾನ್ ಪ್ರಾಯೋಗಿಕ ಕಲಿಕೆಯ ಅಗತ್ಯ, ಗ್ರಾಹಕ ಸುರಕ್ಷತೆ, ಸೇವೆ, ಆಯ್ಕೆ, ತಿಳಿವುಗಳ ಮಹತ್ವ, ವ್ಯಾಜ್ಯ ಪರಿಹಾರ ವೇದಿಕೆಯ ಉಪಯೋಗಗಳ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ವಿದ್ಯಾರ್ಥಿಗಳಿಗೆ ಪರಿಸರ, ಕಂಪ್ಯೂಟರ್, ಗ್ರಾಹಕ ಸಂರಕ್ಷಣಾ ತಿಳಿವಳಿಕೆಗಾಗಿ ಸಾಕಷ್ಟು ಪ್ರಾಯೋಗಿಕ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ ನುಡಿದರು.

ವೇದಿಕೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯ ಮ್ಯಾನೇಜರ್ ವಿಜಯ ಭಟ್, ಗ್ರಾಹಕ ಮಾಹಿತಿ ಕೇಂದ್ರದ ಕೋಶಾಧಿಕಾರಿ ಜಯಪ್ರಕಾಶ ಹಾಜರಿದ್ದರು.

ಕಾರ್ಯದರ್ಶಿ ಸುನಂದ ಕುಂಬ್ಳೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಧನ್ಯ ಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮಂಜುಳಾ ಮಲ್ಯ ಕಾರ್ಯಕ್ರಮ ಸಂಯೋಜಿಸಿದ್ದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಜೊತೆ ಕಾರ್ಯದರ್ಶಿ ರಾಯಿ ರಾಜಕುಮಾರ ಮೂಡುಬಿದಿರೆ ವಂದಿಸಿದರು.