ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮೃದ್ಧಿ ಸಭಾಂಗಣದಲ್ಲಿ ನಡೆದ ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಾಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಮಾತನಾಡಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ, ಸಹಕಾರ ಕಾಯಿದೆ, ನಿಯಮಗಳ ಅನುಸಾರ ಆಡಳಿತ ನಿರ್ವಹಣೆ ಮಾಡಬೇಕು, ಹಾಗೂ ಸಾಲ ನೀಡುವಾಗ ಉಪನಿಯಮದಲ್ಲಿ ಇರುವಂತಹ ನಿಯಮಗಳ ಅನುಸಾರ ಸಾಲ ನೀಡಬೇಕು . ಸಾಲ ನೀಡುವಾಗ ಕರಾರು ಪತ್ರಗಳನ್ನು ಕೂಲಂಕೂಶವಾಗಿ ಪರಿಶೀಲಿಸಿ ಸಾಲ ಮಂಜೂರು ಮಾಡುವುದು ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಮಂಗಳೂರು, ಇದರ ನಿರ್ದೇಶಕರಾದ ಕುಶಾಲಪ್ಪ ಗೌಡ ಮಾತನಾಡಿ ಈ ತರಬೇತಿಯಲ್ಲಿ ಅಳವಡಿಸಿರುವ ವಿಷಯಗಳನ್ನು ತಿಳಿದುಕೊಂಡು ತಮ್ಮ ತಮ್ಮ ಸಂಘಗಳಲ್ಲಿ ಕಾರ್ಯರೂಪಕ್ಕೆ ತರಲು ತಿಳಿಸಿದರು.
ಕರ್ನಾಟಕ ಸರ್ಕಾರ ನೀಡುವ “ಸಹಕಾರ ರತ್ನ” ಪ್ರಶಸ್ತಿ ಪುರಸ್ಕ್ರತರಾದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು, ಇದರ ನಿರ್ದೇಶಕರಾದ ಸತೀಶ್ ಕೆ ಇವರನ್ನು ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಗೌರವಿಸಲಾಯಿತು.
ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಂತೋನಿ ಫೆರ್ನಾಂಡಿಸ್ ರವರು ಮಾತನಾಡಿ ಯಾವುದೇ ತರಬೇತಿ ಏರ್ಪಡಿಸಿದರು ಅದರಲ್ಲಿ ಆಡಳಿತ ಮಂಡಳಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಹಾಗೂ ಕೇಂದ್ರಿಯ ವಿದ್ಯಾಲಯ ಸಂಘಟನ ತರಬೇತಿ ದಾರರಾದ ಎಸ್.ಎನ್. ಭಟಗ ಸೈಪಂಗಲ್ಲು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಿರ್ದೇಶಕರಾದ ಪ್ರವೀಣ್ ಪಿಂಟೋ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಎನ್. ರಘು, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರು, ಹಾಗೂ ಎಲ್ಲಾ ನಿರ್ದೆಶಕರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತ ಕೋರಿದರು. ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ .ಎ. ಇವರು ವಂದಿಸಿದರು. ಶಿವಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು.