ಕಂಬಾತ್ ಕೊಲ್ಲಿ ಪ್ರದೇಶದ ದೋಲೆರಾ ಒಂದು ಮರಿ ಬಂದರು. ಇದನ್ನು ಗಿಫ್ಟ್- ಗುಜರಾತ್ ಅಂತರರಾಷ್ಟ್ರೀಯ ಆರ್ಥಿಕ ಟೆಕ್ ನಗರ ಮಾಡುವುದಾಗಿ ಮುಖ್ಯಮಂತ್ರಿ ಮೋದಿ 2008ರಲ್ಲಿ ಹೇಳಿದ್ದರು. ಮಯ ನಗರ ಧರೆಗಿಳಿದ ಪ್ರಚಾರ ಅದಕ್ಕೆ ಸಿಕ್ಕಿತು. ಅದು ಅನಂತರ ಎಲ್ಲೋ ಮೂಲೆ ಸೇರಿ 2014ರಲ್ಲಿ ಪ್ರಧಾನಿ ಮೋದಿ ಘೋಷಿತ ಮೊದಲ ಬುದ್ಧಿವಂತ ನಗರ ಎಂಬ ಪ್ರಚಾರವನ್ನು ದೋಲೆರಾ ಪಡೆಯಿತು.
ಆಗ ಡಿಎಂಐಸಿ- ದೆಹಲಿ ಮುಂಬಯಿ ಕೈಗಾರಿಕಾ ಕಾರಿಡಾರ್ ನಡುವೆ ಏಳು ಬುದ್ಧಿವಂತ ನಗರ ಹೊಸದಾಗಿ ನಿರ್ಮಿಸುವ ಹೇಳಿಕೆಯೂ ಬಂತು. ವೆಂಕಯ್ಯ ನಾಯ್ಡು ಹೊಸದರ ಬದಲು ಇರುವ ನಗರಗಳನ್ನು ಬುದ್ಧಿವಂತ ನಗರ ಮಾಡಿ ಎಂದರು. ಅವರನ್ನು ಮೆಲ್ಲ ಆಚೆ ಕಳುಹಿಸಲಾಯಿತು.
ಆದರೆ ಮುಂದೆ ಇರುವ ಪಟ್ಟಣಗಳನ್ನೇ ಬುದ್ಧಿವಂತ ನಗರಕ್ಕೆ ಪಟ್ಟಿ ಮಾಡಲಾಗಿದೆ.
ಸ್ಪೆಯಿನ್‌ನಲ್ಲಿ ಬಾರ್ಸಿಲೋನಾ, ಫ್ರಾನ್ಸಿನಲ್ಲಿ ಮಾಂಟ್‌ಪೆಲಿರ್ ನಗರಗಳನ್ನು ಉತ್ತಮ ಬಾಳ್ವೆ ಸೇವೆಗೆ ಮಾರ್ಗಸೂಚಿ ಎಂದು ಬುದ್ಧಿವಂತ ನಗರ ಮಾಡಲಾಗಿದೆ. ಮಂಗಳೂರು ಸೇರಿ ಭಾರತದಲ್ಲಿ ಕಾಂಕ್ರೀಟ್ ಕಾಡು ಮಾಡಿದರೆ ಬುದ್ಧಿವಂತ ನಗರ ಎನ್ನುತ್ತಿದ್ದಾರೆ. ಸೇವೆ ಗೋವಿಂದ ಮಾರಾಯ.
ದೋಲೆರಾ ಪ್ರವಾಹ ಪೀಡಿತ ಪ್ರದೇಶ. 2019 ಮತ್ತು ಇತ್ತೀಚೆಗೆ ನೆರೆ ಬಂದಿತ್ತು. ಇಂಥಲ್ಲಿ 12 ಕಿಲೋ ಮೀಟರ್ ಉದ್ದದ ಸುರಂಗ ಪೇಟೆ ಯೋಜನೆಗಾಗಿ ಅಗೆತ ಆಗಿದೆ.
ಇದನ್ನು ಡೊಲೆರಾ ಎಂದು ಬರೆಯುವುದು ತಪ್ಪು, ಇದು ದೋಲೆರಾ. ಅಹಮದಾಬಾದ್ ವಿಮಾನ ನಿಲ್ದಾಣದಿಂದ 18 ಕಿಮೀ ದೂರದಲ್ಲಿದೆ. ಇಲ್ಲಿ ಕೊಡುಗೆ ಮತ್ತು ಬುದ್ಧಿವಂತ ಎಂದು ಅಗೆಯುತ್ತ ಎರಡು 28 ಮಹಡಿಯ ಕಟ್ಟಡ ನಿರ್ಮಾಣ ನಿಲ್ಲುತ್ತ ಸಾಗಿದೆ ಅಷ್ಟೆ. ದೋಲೆರಾ ಪ್ರಚಾರದ ಸರಕು ಹೊರತು ವಿಚಾರದ ಸರಕು ಅಲ್ಲ.