ಹಿಂದೆಲ್ಲ ತುಳುನಾಡಿನಲ್ಲಿ ಸೊಪ್ಪುಗಳ ಬಳಕೆ ಮಿತಿಯಲ್ಲಿ ಇತ್ತು. ಇಂದು ಬಗೆ ಬಗೆಯ ಸೊಪ್ಪುಗಳು ಮಂಗಳೂರು ಸಹಿತ ಕರಾವಳಿಯ ಸಂತೆಗಳಲ್ಲಿ ಲಭ್ಯವಿವೆ.

ಮುಖ್ಯವಾಗಿ ಇಲ್ಲಿನ ಸೊಪ್ಪು ತರಕಾರಿ ಎಂದರೆ ಬಸಳೆ ಮತ್ತು ಹರಿವೆ. ಅಗಿಯಲು ದಂಟು ಮುಖ್ಯ. ಹರಿವೆ ಸೊಪ್ಪಿನ ಬದಲು ದಪ್ಪ ದಂಟು ಆದ ಮೇಲೆ ಬಳಸುವುದು ಪದ್ಧತಿ. ಒಂದೆಲಗ, ಕೆಸು, ಚಗಟೆಯಂಥ ಸೊಪ್ಪುಗಳ ಬಳಕೆ ಕಾಲ ರೀತ್ಯಾ ಆಗುತ್ತದೆ.

ನಾನು ಸಣ್ಣವನಿದ್ದಾಗ ಇಜಿನ್ (ಕಂಕುಲ) ಎಲೆಯನ್ನು ಹಸಿ ಬಳಸುತ್ತಿದ್ದರು. ಕೆಲವು ಹುಳಿ ಎಲೆ ಸಹಿತದ್ದನ್ನು ವರುಷದಲ್ಲಿ ಎಲ್ಲೋ ಒಮ್ಮೆ ಬಳಸುತ್ತಿದ್ದರು. ಒಳ್ಳೆದ ಕುಡಿಯಂಥ ಕೆಲವು ಎಲೆಗಳ ಕಷಾಯ ಬಳಸುತ್ತಿದ್ದುದಿತ್ತು.

ಇನ್ನು ಗಟ್ಟಿ, ಗುಂಡಕ್ಕೆ ಮುಂಡಕ,  ಹಲಸಿನ ಎಲೆ, ನಾಗ ಸಂಪಿಗೆ ಎಲೆ, ಅರಿಸಿನ ಎಲೆ, ತೇಗದ ಎಲೆ, ಬಾಳೆ ಎಲೆ ಬಳಸುವರಾದರೂ ಆ ಎಲೆಗಳನ್ನು ತಿನ್ನುವ ಪದ್ಧತಿ ಇಲ್ಲ. ನಾಗ ಸಂಪಿಗೆ ಎಲೆಯಲ್ಲಿ ಸೊನೆ ಇದ್ದರೂ ಕಡುಬು ಬೇಯಿಸಿದಾಗ ಅದರ ಸೊಗಸೇ ಬೇರೆ.

ಉತ್ತರ ಕರ್ನಾಟಕದಲ್ಲಿ ಅಡುಗೆ ಮಾಡುವಾಗ ಸಾಕಷ್ಟು ಬಗೆಯ‌ ಸೊಪ್ಪುಗಳನ್ನು ಬಳಸುತ್ತಾರೆ. ಅವೆಲ್ಲ ಈಗ ತುಳುನಾಡಿನ ತರಕಾರಿ ಅಂಗಡಿಗಳಲ್ಲಿ ಲಭ್ಯ.

ತರಕಾರಿ ಎಂಬ ಪರ್ಶಿಯನ್ ಅರಾಬಿಕ್ ಶಬ್ದಕ್ಕೆ‌ ನಾವು ಎಷ್ಟು ಹೊಂದಿಕೊಂಡಿದ್ದೇವೆಂದರೆ ನಮ್ಮ ಕಾಯಿಪಲ್ಯ, ಕಾಯಿಕಜಿಪು‌ ನೆನಪು ಸಹ ಆಗುವುದಿಲ್ಲ.

ಉತ್ತರ ಕರ್ನಾಟಕದವರು ಹೆಚ್ಚಾಗಿ ಬಳಸುವ ಪುಂಡಿಪಲ್ಲೆ ಸೊಪ್ಪು ಸೆಣಬಿನ ಜಾತಿಯದು. ನಾನು ಸಣ್ಣವನಿದ್ದಾಗ ಮರಕ್ಕಲರು‌ ತಾವೇ ಸೆಣಬು‌ ನೆಟ್ಟು, ನಾರು ತೆಗೆದು, ನೂಲು ಮಾಡಿ, ಬಲೆ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಅದರ ಎಳೆ‌ ಸೊಪ್ಪು ಪಲ್ಯ ಮಾಡಿದ್ದು ನೋಡಿಲ್ಲ.

ಈಗ ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಬ್ಬಸಿಗೆ, ಪುದೀನಾ, ಕೊತ್ತಂಬರಿ, ಎಳೆ ಹರಿವೆ, ಮೆಂತೆ ಎಂದು ಹತ್ತಾರು ಬಗೆಯ ಸೊಪ್ಪುಗಳು ದೊರೆಯುತ್ತವೆ.