ಉಜಿರೆ.ನ.14: “ವ್ಯಸನ ಎನ್ನುವುದು ಶ್ರೀಮಂತರು, ಬಡವರು, ಸಾಮಾನ್ಯ ಜನರು, ವಿದ್ಯಾವಂತರು, ಅವಿದ್ಯಾವಂತರು, ಬುದ್ಧಿವಂತರು, ಬುದ್ಧಿಹೀನರು ಎಂಬ ಬೇಧವಿಲ್ಲದೆ ಎಲ್ಲರನ್ನೂ ಆವರಿಸುತ್ತದೆ. ಇದು ಒಂದು ಮಾನಸಿಕ ದೌರ್ಬಲ್ಯ. ಅವರವರ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಿಗೆ ಸಂಬಂಧಿಸಿದ್ದು. ಮನಸ್ಸು, ಬುದ್ಧಿ ಬಹಳ ಚಂಚಲವಾಗಿರುತ್ತದೆ. ಅವುಗಳ ಹತೋಟಿ ಮತ್ತು ನಿರ್ವಹಣೆ ಮಾಡುವುದೇ ಬಹಳ ಪ್ರಾಮುಖ್ಯವಾದ ವಿಷಯ. ಮನಸ್ಸು ಮಾಡಿದರೆ ನಾವು ಯಾವುದನ್ನೂ ಸಾಧಿಸಬಹುದು. ಬುದ್ಧಿ ಹಾಳಾದರೆ ಒಂದೇ ಕ್ಷಣದಲ್ಲಿ ಸೋಲವನ್ನು ಅನುಭವಿಸಬಹುದು. ಇದಕ್ಕಾಗಿ ದೃಢ ಸಂಕಲ್ಪವನ್ನು ಮಾಡಿಕೊಂಡು ಅಮೂಲ್ಯವಾದ ಬದುಕನ್ನು ರೂಪಿಸಿಕೊಳ್ಳಬೇಕು. “ಮಾದಕ ವ್ಯಸನ ಬೆಂಕಿ ಕಡ್ಡಿಯಂತೆ. ಇದರ ಬಳಕೆಯಿಂದ ಕುಟುಂಬ ಜೀವನಕ್ಕೆ ಬೆಂಕಿಗಾಹುತಿಯಾಗುವ ಅಪಾಯವಿದೆ. ಪ್ರಾಣಿ ಪಕ್ಷಿಗಳಿಗೆ ಸತ್ತ ನಂತರವೂ ಬೆಲೆ ಬರುತ್ತದೆ. ಆದರೆ ಮನುಷ್ಯನಿಗೆ ಬದುಕಿರುವಾಗ ಮಾತ್ರ ಬೆಲೆಯಿದೆ. ಶ್ರೀಮಂತಿಕೆಯ ವ್ಯಾಖ್ಯಾನ, ದುಡ್ಡು, ಐಶ್ವರ್ಯಗಳು ಆಸ್ತಿ ಅಲ್ಲ. ಸುಖ, ಸಂತೋಷ, ನೆಮ್ಮದಿ, ಆರೋಗ್ಯವೇ ಆಗಿದೆ. ಅಮೂಲ್ಯವಾದ ಬೆಲೆ ಬಾಳುವ ನಮ್ಮ ಜೀವನಕ್ಕೆ ಮಾದಕ ಮತ್ತು ಮದ್ಯವ್ಯಸನಗಳು ಮಾರಕವಾಗಿವೆ. ಆದುದರಿಂದ ಶಿಬಿರದಿಂದ ಆತ್ಮ ವಿಶ್ವಾಸದ ಪಾಠವನ್ನು ಪಡೆದು ಆತ್ಮಸ್ಥೈರ್ಯವನ್ನು ಹೊಂದಿಕೊಂಡು ನವಜೀವನ ಪಡೆಯಿರಿ”ಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 164ನೇ ವಿಶೇಷ ಶಿಬಿರದ 79ಮಂದಿ ಶಿಬಿರಾರ್ಥಿಗಳನ್ನುಉದ್ದೇಶಿಸಿ ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಕುಟುಂಬದ ದಿನದ ಅಂಗವಾಗಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ ದೇವರ ಪ್ರೀತಿ, ಕೌಟುಂಬಿಕ ಸಂಬಂಧ, ಹಿರಿಯರಿಗೆ ಗೌರವ, ಮತ್ತು ಸಾಮಾಜಿಕ ಜೀವನದ ಕುರಿತು ವಿವರವಾಗಿ ಮಾಹಿತಿ ನೀಡಿ ಪ್ರೇರಣೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಯವರಾದ ಶ್ರೀ ಹನುಮ ನರಸಯ್ಯ ಮಾತನಾಡುತ್ತಾ ಮದ್ಯವರ್ಜನ ಶಿಬಿರಗಳ ಮೂಲಕ ರಾಜ್ಯವ್ಯಾಪಿ ಅತೀ ಹೆಚ್ಚು ವ್ಯಸನಿಗಳನ್ನು ಗುರುತಿಸಿ ಅವರನ್ನು ಸರಿದಾರಿಗೆ ತರುವಲ್ಲಿ ಪ್ರಯತ್ನಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಯತ್ನ ಅನುಕರಣೀಯವಾಗಿದೆ. ಮಠ ಮಂದಿರಗಳ ಮೂಲಕ ಜಾಗೃತಿ ಕಾರ್ಯಗಳು ಹೆಚ್ಚು ಹೆಚ್ಚು ನಡೆದಾಗ ಅವುಗಳನ್ನು ಯಶಸ್ವಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ” ಎಂದರು. ಸಭೆಯಲ್ಲಿ ನಿವೃತ್ತ ನೊಂದವಣಾಧಿಕಾರಿ ರಂಗಸ್ವಾಮಿ, ನಿವೃತ್ತ ಪೋಲೀಸು ಇನ್ಸ್‍ಪೆಕ್ಟರ್ ಶಿವಕುಮಾರ್, ಗಾಂಧಿ ಭವನ ಬೆಂಗಳೂರಿನನಂದೀಶ್, ಪುತ್ತೂರಿನ ಜಗದೀಶ್ ನೆಲ್ಲಿಕಟ್ಟೆ, ಕಾಟಿಪಳ್ಳದ ಮೈಮುನಾ ಫೌಂಡೇಶನ್ ಇದರ ಅಧ್ಯಕ್ಷರಾದ =ಆಸಿಫ್ ಆಪತ್ಪಾಂಧವ, ಬೆಳ್ತಂಗಡಿಯ ಸಮಾಜಸೇವಕ ಜಲೀಲ್ ಬಾಬಾಉಪಸ್ಥಿತರಿದ್ದರು. ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್ ಶಿಬಿರದ ನೇತೃತ್ವ ವಹಿಸಿದ್ದು,ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ನಾಗರಾಜ್, ಆರೋಗ್ಯ ಸಹಾಯಕಿಕು. ರಂಜಿತಾಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:22.11.2021 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.