ವಿದ್ಯಾಗಿರಿ: ‘ಲೇಕ್ 2024’ ಸಮ್ಮೇಳನವು ಪ್ರಸ್ತುತ ಜ್ವಲಂತ ಸಮಸ್ಯೆಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಸುಸ್ಥಿರ ಹಾಗೂ ಸದುದ್ದೇಶಗಳನ್ನು ಹೊಂದಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‍ಸಿ) ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಇವುಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ‘ಲೇಕ್ 2024- 14ನೇ ದ್ವೈವಾರ್ಷಿಕ ಕೆರೆ (ಸರೋವರ) ಸಮ್ಮೇಳನ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಹಲವು ವರ್ಷಗಳಿಂದ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಹಾನಿ, ಭೂಕುಸಿತ ಮತ್ತು ಜಲಪ್ರಳಯದ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಪ್ರಕೃತಿ, ಪ್ರಾಣಿಸಂಕುಲ, ಸಸ್ಯವರ್ಗ ನಾಶವಾಗುತ್ತಿವೆ. ಈ ನಿಟ್ಟಿನಲ್ಲಿ ಕೆರೆಗಳ ಕುರಿತು ಚಿಂತನ ನಡೆಸುವುದು ಬಹಳ ಅವಶ್ಯಕವಾಗಿದೆ ಎಂದು ಅವರು ವಿವರಿಸಿದರು. 

ಅಳಿವೆ ಉಳಿಸುವ ಕಾರ್ಯ, ಹಸಿರು ಬಜೆಟ್ ಆರಂಭಿಸುವುದು ಮತ್ತು ಪರಿಸರ ಪೂರಕ ಶ್ವೇತಪತ್ರ ಬಿಡುಗಡೆಗೊಳಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಇಂದು ಭೂಮಿಪೂಜೆಯ ದಿನವಾದ್ದರಿಂದ ಭೂಮಿಯನ್ನು ಸಂರಕ್ಷಿಸಲು ಆಯೋಜಿಸಿದ ನಾಲ್ಕು ದಿನದ ‘ಲೇಕ್-2024’(ಕೆರೆ-2024) ವಿಚಾರ ಸಂಕಿರಣವು ಬಹಳ ಪ್ರಯೋಜನಕಾರಿ ಎಂದರು. 

ಜೀವವೈವಿಧ್ಯ ಹಾಗೂ ಕೆರೆಗಳ ರಕ್ಷಣೆ, ಮರುಸ್ಥಾಪನೆ ಮತ್ತು ಪರಿಸರ ವ್ಯವಸ್ಥೆಗಳು ಹಾಗೂ ಅವುಗಳ ಸ್ಥಿತಿಸ್ಥಾಪಕತ್ವ ಮತ್ತು ಸಾಮಥ್ರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಸಮರ್ಥವಾಗಿ ನಿರ್ವಹಿಸುವುದು ಬಹುಮುಖ್ಯವಾಗಿದೆ. ಸಾಮಾಜಿಕ ಸವಾಲುಗಳನ್ನು ಎದುರಿಸಲು, ಜೀವವೈವಿಧ್ಯತೆಯನ್ನು ಕಾಪಾಡುವುದು ಮುಖ್ಯವಾಗಿದ್ದು, ಇದು ಮಾನವ ಯೋಗಕ್ಷೇಮವನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದು ಹೇಳಿದರು . 

ಸದ್ಯಕ್ಕೆ ರಾಜ್ಯದಲ್ಲಿ 6,000 ಜೀವ ವೈವಿಧ್ಯತೆಗಳನ್ನು ಗುರುತಿಸಲಾಗಿದೆ. ಇದಕ್ಕೆ ಪೂರಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆ ಸಂರಕ್ಷಣೆಯ ಕುರಿತು ಅನೇಕ ಕಾರ್ಯವನ್ನು ಮಾಡುತ್ತಾ ಬರುತ್ತಿದೆ ಎಂದರು. 

ಕೋಲಾರ ಸಮೀಪದ ಬೆಟ್ಟಗಳು ನಾಶವಾಗುವ ಭೀತಿಯಲ್ಲಿರುವುದು ಬೇಸರದ ಸಂಗತಿ. ಕಾಡು, ಬೆಟ್ಟಗಳ ಉಳಿವಿಗಾಗಿ ಇನ್ನಷ್ಟು ಹೊಸ ಜನಾಂದೋಲನ ಮತ್ತು ಪಾದಯಾತ್ರೆಗಳು ನಡೆಯಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.  

ಯುರೇನಿಯಂ ಮತ್ತಿತರ ಹಾನಿಕಾರಕ ಅಂಶಗಳು ನದಿಗಳ ರಕ್ಷಣೆಗೆ ಅಡ್ಡಿಪಡಿಸುತ್ತಿವೆ. ಹಳ್ಳಿಯ ಜನರಿಗೆ ಕೆರೆರಕ್ಷಣೆ ಕಾರ್ಯವನ್ನು ಮಾಡಲು ರಾಜ್ಯ ಸರ್ಕಾರ ಅನೇಕ ರೂಪುರೇಷೆಗಳನ್ನು ಆಯೋಜಿಸಬೇಕು ಎಂದರು. 

ಸುಸ್ಥಿರ ಅಭಿವೃದ್ದಿಗಾಗಿ ಕೆರೆ ಕುರಿತ ಚರ್ಚೆ, ಸೂಕ್ತ ಯೋಜನೆಗಳನ್ನು  ರೂಪಿಸಬೇಕು. ಇದರೊಂದಿಗೆ ಪಶ್ಚಿಮ ಘಟ್ಟವನ್ನು ಉಳಿಸುವುದು ಅತಿ ಅವಶ್ಯಕ ಎಂದರು . 

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕನಿಷ್ಠ ನೂರು ಮಾದರಿ ಕೆರೆಗಳನ್ನು ರಕ್ಷಿಸಲು ಮುಂಬರಬೇಕು. ಕೆರೆ, ಪ್ರಕೃತಿ ಮಾನವ ಸಂಪನ್ಮೂಲಗಳ ಕುರಿತ ಅನೇಕ ಕ್ರಮ, ನಿಯಮ ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆದರೆ ಮಾತ್ರ ಕೆರೆ, ನದಿಗಳ ಉಳಿವು, ಸಂರಕ್ಷಣೆ ಸಾಧ್ಯ ಎಂದು ಹೇಳಿದರು . 

ಉಪ ಅರಣ್ಯ ಸಂರಕ್ಷಣಾಧಿಕಾರಿ  ಅಂಥೋನಿ ಎಸ್. ಮರಿಯಪ್ಪ ಮಾತನಾಡಿ,  ಕೆರೆಗಳ ಸೂಕ್ತ ಸಂರಕ್ಷಣೆಯ ಕೊರತೆಯಿಂದ ವಯನಾಡು ಮತ್ತು ಶೀರೂರು ಭಾಗದ ಜೌಗುಭೂಮಿ ಕುಸಿತಗೊಂಡಿದ್ದನ್ನು ಗಮನಿಸಿದ್ದೇವೆ. ಪ್ರಕೃತಿಯ ಎಲ್ಲವೂ ಸಮತೋಲನದಿಂದ ಸಾಗಬೇಕು. ಇದರಿಂದ ಸುಸ್ಥಿರ ಅಭಿವೃದ್ಧಿಯ ದಿನವನ್ನು ಕಾಣಲು ಸಾಧ್ಯ ಎಂದರು . 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪಶ್ಚಿಮ ಘಟ್ಟಗಳು ಪ್ರಪಂಚದ ಮುಖ್ಯ ಬಿಂದು. ಪ್ರತಿಯೊಬ್ಬರೂ ಹೆಚ್ಚು ಜವಾಬ್ದಾರಿಯುತವಾಗಿ ನಮ್ಮ ಸುತ್ತಲಿನ ನದಿಗಳು, ಕೆರೆಗಳನ್ನು ರಕ್ಷಿಸುವ  ಕಾರ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು. 

ಮನುಷ್ಯ ಸೇರಿದಂತೆ ಜೀವವೈವಿಧ್ಯವನ್ನು ಕಾಪಾಡಿದ ಜಗತ್ತಿನ ಮಹಾ ಅದ್ಭುತಗಳು ಅಳಿಸಿಹೋಗುತ್ತಿವೆ. ಅದರ ಮರುನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಕೊಡುಗೆ ನೀಡಿದ್ದ ಆರು ಗಣ್ಯರಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು. ಬಳಿಕ, ಉಪನ್ಯಾಸ, ತಾಂತ್ರಿಕ ಸೆಷನ್ಸ್- ಯುವ ಸಂಶೋಧಕರಿಂದ ಪ್ರಸ್ತುತಿಗಳು, ಹಿರಿಯ ಸಂಶೋಧಕರಿಂದ ಪ್ರಸ್ತುತಿಗಳು, ಜಾನಿ ಬಯೋಸ್ಪಿಯರ್ ಸೆಷನ್- ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಅಧಿವೇಶನಗಳು ನಡೆದವು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ , ಐಐಎಸ್ಸಿಯ ಡಾ.ಟಿ.ವಿ. ರಾಮಚಂದ್ರ,  ಕೆನಡಾದ ಪರಿಸರವಾದಿ ಡಾ. ರಾಜಶೇಖರ್ ಮೂರ್ತಿ, ಐಐಎಸ್ಸಿ ಕುಮಟಾದ ಎಂ.ಡಿ. ಸುಭಾಷ್  ಚಂದ್ರನ್, ಅರ್ಥಶಾಸ್ತ್ರಜ್ಞ ಮತ್ತು ಪರಿಸರವಾದಿ ಡಿ.ಎಂ. ಕುಮಾರಸ್ವಾಮಿ, ವಾಗ್ದೇವಿ ವಿಲಾಸ ಸಂಸ್ಥೆಗಳ ಅಧ್ಯಕ್ಷ  ಹರಿಕೃಷ್ಣಮೂರ್ತಿ,  ಕೆರೆ  ಸಮ್ಮೇಳನದ  ಸಂಘಟನಾ ಕಾರ್ಯದರ್ಶಿ ಡಾ. ವಿನಯ್, ವಿವಿಧ ಕಾಲೇಜಿನ  ಪ್ರಾಂಶುಪಾಲರು, ರಾಜ್ಯದ ವಿವಿಧ ಕಾಲೇಜುಗಳ ಡೀನ್‍ಗಳು ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಇದ್ದರು. 

ಕಾರ್ಯಕ್ರಮವನ್ನು  ಆಳ್ವಾಸ್ ಪ.ಪೂ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ರಾಜೇಶ್ ಡಿಸೋಜಾ  ನಿರೂಪಿಸಿ, ಲೇಕ್  ಸಮ್ಮೇಳನದ  ಸಂಘಟನಾ ಕಾರ್ಯದರ್ಶಿ ಡಾ. ದತ್ತಾತ್ರೇಯ ಗುಜ್ಜಾರ್  ವಂದಿಸಿದರು.