ಉಜಿರೆ: ನವದೆಹಲಿಯಲ್ಲಿ ನಿರ್ಮಾಣಭವನದಲ್ಲಿ ನಡೆದ ಸಭೆಯಲ್ಲಿ ಉಜಿರೆಯಲ್ಲಿರುವ ಎಸ್. ಡಿ. ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಮಾಡಿದ ಸೇವೆ, ಸಾಧನೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ರಾಷ್ಟ್ರಮಟ್ಟದ ಮಾನ್ಯತೆ ಲಭಿಸಿದೆ.
ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿಗೊಳಿಸುವಂತೆ ಕೋರಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು ಇದಕ್ಕೆ ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ನೀಡಿದೆ.
ಕೇಂದ್ರ ಸರ್ಕಾರದ ಆಯುಷ್ ಸಚಿವ ಪ್ರತಾಪರಾವ್ ಗಣಪತ್ ರಾವ್ ಜಾಧವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭಾ ಸದಸ್ಯರಾದ ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರು, ಭಾರತದ ಸಿಸ್ಟಮ್ ಆಫ್ ಮೆಡಿಸಿನ್‌ನ ರಾಷ್ಟ್ರೀಯ ಆಯೋಗದ ಸದಸ್ಯರು, ಬೆಂಗಳೂರಿನ ಎಸ್ ವ್ಯಾಸದ ಚಾನ್ಸಲರ್ ಡಾ. ಎಚ್.ಆರ್. ನಾಗೇಂದ್ರ ಭಾಗವಹಿಸಿದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಪ್ರಸ್ತಾವನೆಗೆ ಮಂತ್ರಿಮಂಡಲ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ದೊರಕಿದೆ. ಈ ಬಗ್ಯೆ ಡಿ. ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ.
2025 ರ ಜನವರಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಸಭೆಯ ಬಳಿಕ ನವದೆಹಲಿಯಲ್ಲಿ 2025 ರ ಫೆ.4 ರಂದು ಎರಡನೆ ಸಭೆಯನ್ನು ಕೇಂದ್ರ ಆಯುಷ್ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿ ಈ ಮಾನ್ಯತೆ ನೀಡಲಾಗಿದೆ.