ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ವಿಶಾಲವಾದ ಮೂರು ಅಂಗಣಗಳಲ್ಲಿ ಕುಶಲಿಗಳು, ಕರ ಸೇವಕರು ಅತ್ಯದ್ಭುತ ರಚನೆಗಳನ್ನು ಮೂಡಿಸಿದ್ದಾರೆ. ದೇವರು ಸರ್ವತ್ರ ಇದ್ದರೂ, ರೇಡಿಯೋ, ಟಿವಿ ಯಂತೆ ಅನುಭವಕ್ಕಾಗಿ ಮಂದಿರ, ಪ್ರತಿಮೆಗಳಿರುವ ದೇವಾಲಯ ಅಗತ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ಮಾರ್ಚ್ 6 ರಂದು ಪುತ್ತೆ ಸೋಮನಾಥೇಶ್ವರನ, ಮಹಿಷಮರ್ಧಿನಿ ಅಮ್ಮನವರ ಬ್ರಹ್ಮಕಲಶೋತ್ಸವ ದಿನದಂದು ತಿರುಮಲರಾಯ ಚೌಟ ವೇದಿಕೆಯಲ್ಲಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮೂರು ಲೋಕವನ್ನು ವ್ಯಾಪಿಸಿದ ಶಿವಲಿಂಗದಲ್ಲಿ ಮೂರು ಭಾಗಗಳಿವೆ. ರುದ್ರದೇವ ಹಿಮಾಲಯದ ತಪ್ಪಲಿನಲ್ಲಿ ಚಂದ್ರ, ಗಂಗೆಯರೊಂದಿಗೆ ಅಭಿಷೇಕ ಪ್ರಿಯನು. ಯಕ್ಷಗಾನ ಕಲೆಯಲ್ಲಿ ಜೀವ ಪೂರ್ಣತೆ ಇದೆ. ಅಂತಹ ಗುರುಕುಲ ಪದ್ಧತಿಯ ಶಿಕ್ಷಣ ಮುನ್ನೆಲೆಗೆ ಬಂದು ಭಾರತೀಯರು ಬೆಳಗಲಿ ಎಂದು ವಾಸ್ತು ತಜ್ಞ ಅವಧಾನಿ ಗುಂಡಿ ಬೈಲು ಸುಬ್ರಹ್ಮಣ್ಯ ಭಟ್ ಆಶಿಸಿದರು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜಗತ್ತಿನ ದೇವರಕೋಣೆ ಭಾರತವಾದರೆ ಭಾರತದ ದೇವರ ಕೋಣೆ ಪರಶುರಾಮ ಸೃಷ್ಟಿಯ ಕರಾವಳಿ. ಒಂದು ಲಕ್ಷಕ್ಕೂ ಮಿಕ್ಕಿ ಕರಸೇವಕರ, ಕುಡುಬಿ ಜನಾಂಗದ ಉತ್ಸಾಹಕ್ಕೆ ಶಿರಬಾಗಿ ನಮಿಸಿದರು. ರಾಮದಾಸ ಮಡ್ಮಣ್ಣಾಯರು 60 ಸೆಂಟ್ಸ್ ಜಾಗದ ದಾನಪತ್ರ ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ ಸುಂದರವಾಗಿ ನಿರ್ಮಾಣ ಗೊಂಡ ಕ್ಷೇತ್ರದ ಪವಿತ್ರತೆಯನ್ನು ಅಂತರಂಗ, ಬಹಿರಂಗಗಳಲ್ಲಿ ಧ್ಯಾನ, ಪ್ರಾರ್ಥನೆ, ಭಜನೆ, ಹಾಡುಗಳೊಂದಿಗೆ ಪ್ರತೀ ಸೋಮವಾರ, ಶುಕ್ರವಾರ ಊರವರು ಸೇರಿ ಶುದ್ಧ,ಸ್ವಚ್ಛ ವಾಗಿಡಿ ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ನ ಡಾ.ಮೋಹನ ಆಳ್ವ, ಮುಗ್ರೋಡಿ ಯ ಸುಧಾಕರ ಶೆಟ್ಟಿ, ವಕೀಲ ಪ್ರಕಾಶ್ ಶೆಟ್ಟಿ, ಅದಾನಿಯ ಕಿಶೋರ್ ಆಳ್ವ, ಪಾಂಡುರಂಗ ಕಾಮತ್, ಧನಲಕ್ಷ್ಮಿ ಯ ಶ್ರೀಪತಿ ಭಟ್, ಕಟ್ಟಣಿಗೆಯ ದಯಾನಂದ ಶೆಟ್ಟಿ, ಬರೋಡಾದ ಶಶಿಧರ ಶೆಟ್ಟಿ, ಎಂ ಬಿ ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ ಹಾಜರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ್ ಎಂ ರವರು ಪುತ್ತಿಗೆ ಗುತ್ತು ಕೊಲಕಾಡಿ ನೀಲೇಶ್ ಶೆಟ್ಟಿ, ಹರೀಶ್ ಆಚಾರ್ಯ ಹಾಗೂ ಇನ್ನಿತರರ ಸಂಪೂರ್ಣ ಸಹಕಾರಕ್ಕೆ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸಿದರು.