ಮಂಗಳೂರು ಮಾ.6: ತುಳು ಭಾಷೆ, ತುಳು ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸಲು ಪ್ರೇರಣೆಯಾಗಿ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಲು ತುಳು ಜನಪದ ನೃತ್ಯಗಳ ಬಗೆಗಿನ ಒಲವಿನಿಂದ ಸಾಧ್ಯವಾಗಲಿದೆ ಎಂದು ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಶೇಷಪ್ಪ ಅಮೀನ್ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಪರಿಷತ್‍ ಜಂಟಿಯಾಗಿ ಆಯೋಜಿಸಿರುವ ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿಯಾಗಿ ತುಳು ಭವನದಲ್ಲಿ ಬುಧವಾರನಡೆದ ತುಳು ಜನಪದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‍ ಗಟ್ಟಿ ಕಾಪಿಕಾಡ್ ಮಾತನಾಡಿ, ವಿದ್ಯಾರ್ಥಿ ಯುವಜನತೆಗೆ ತುಳುವಿನ ಬಗ್ಗೆ ಅಭಿಮಾನ, ಅಧ್ಯಯನ ಆಸಕ್ತಿ ಮೂಡಿಸುವ ಸಲುವಾಗಿ ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತುಳು ಪರಿಷತ್‍ ಅಧ್ಯಕ್ಷ ಶುಭೋದಯ ಆಳ್ವ, ಕಾರ್ಯಕ್ರಮದ ಸಂಚಾಲಕಿ ಚಂದ್ರಕಲಾರಾವ್, ತುಳು ಅಕಾಡೆಮಿ ಸದಸ್ಯ ಬೂಬ ಪೂಜಾರಿ ಉಪಸ್ಥಿತರಿದ್ದರು.

ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್‍ ಅಮ್ಮನ್ನ ಸ್ವಾಗತಿಸಿ, ಗೌರವಾಧ್ಯಕ್ಷಡಾ. ಪ್ರಭಾಕರ ನೀರ್‍ಮಾರ್ಗ ವಂದಿಸಿ,  ದಿಯಾ ನಿರೂಪಿಸಿದರು.