ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಅಧೀನದ ಎಲ್ಲಾ ಕಾಲೇಜುಗಳ ಗಣಿತ ಶಿಕ್ಷಕರ ವೇದಿಕೆ (ಫಾರ್ಮೆಟ್) ಸಹಯೋಗದೊಂದಿಗೆ ಬಿ.ಎಸ್ಸಿ ಮೂರನೇ ಸೆಮಿಸ್ಟರ್‌ನ ಪ್ರಾಯೋಗಿಕ ಗಣಿತದ ಕುರಿತು ಅಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಕಾಲೇಜಿನಲ್ಲಿ ಆಯೋಜಿಸಿತ್ತು.
ಗಣಿತ ಪ್ರಯೋಗಾಲಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ಗಣಿತವನ್ನು ಪ್ರಾಯೋಗಿಕವಾಗಿ ಕಲಿಸುವ ಪರಿಕಲ್ಪನೆಯನ್ನು ಶ್ಲಾಘಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಗಣಿತ ಪ್ರಾಧ್ಯಾಪಿಕೆ ಡಾ. ಚೇತನ ಯು. ವಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ʼಫಾರ್ಮೆಟ್ ʼ ಅಧ್ಯಕ್ಷೆ, ಮೂಲ್ಕಿ ವಿಜಯಾ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಕುಮಾರಿ, ಕಾರ್ಯಕ್ರಮ ಸಂಯೋಜಕ ,ವಿವಿ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಸುಮಾರು 35 ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು.
ಬೀಳ್ಕೊಡುಗೆ: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 28 ವರ್ಷಗಳ ಸುಧೀರ್ಘ ಸೇವೆಗೈದು ನಿವೃತ್ತರಾದ ಡಾ. ಚೇತನ ಯು. ವಿ ಅವರನ್ನು ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಬೀಳ್ಕೊಟ್ಟರು. ಎನ್‌ಐಟಿಕೆ, ಸುರತ್ಕಲ್‌ನಲ್ಲಿ ತಮ್ಮ ಸಂಶೋಧನೆ ಮುಗಿಸಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್) ಮತ್ತು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಲ್ಲಿ ಸೇವೆ ಸಲ್ಲಿಸಿದ್ದ ಡಾ. ಚೇತನ, ಮಂಗಳೂರು ವಿಶ್ವವಿದ್ಯಾನಿಲಯದಲ್ಲೂ ಕೆಲ ಸಮಯ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.