ಮಂಗಳೂರು:  ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾದ  ಆನಂದ್ ಇವರು ಆಗಮಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು ವಸತಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಹೊಸ ಪರಿಸರ, ಆಹಾರ, ವ್ಯವಸ್ಥೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೊಂದಾಣಿಕೆ ಮಾಡಿಕೊಂಡು ಶ್ರಮ ಪಟ್ಟು ಓದಿದ ವಿದ್ಯಾರ್ಥಿಗೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಶಕ್ತಿ ಪಪೂ ಕಾಲೇಜು ಉತ್ತಮ ವ್ಯವಸ್ಥೆಯನ್ನು ಒದಗಿಸಿರುವುದರಿಂದಲೇ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಇಲ್ಲಿ ರಾಜ್ಯಮಟ್ಟದ ರ್ಯಾಂಕ್‍ಗಳು ಬರುತ್ತಿವೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ಶಕ್ತಿ ಕಾಲೇಜು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಬೇಕಾಗಿರುವ ಅನೇಕ ಸಲಹೆ ಸೂಚನೆಗಳನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ. ಸಿ. ನಾೈಕ್‍ರವರು ಶಕ್ತಿ ಶಿಕ್ಷಣ ಸಂಸ್ಥೆಯು ಸೇವಾ ದೃಷ್ಟಿಯಿಂದ ಸ್ಥಾಪನೆಗೊಂಡಿದೆ. ವಿದ್ಯಾರ್ಥಿಗಳು ದೇಶದ ಸಂಪತ್ತಾಗುವ ಮೂಲಕ ಈ ಸಂಸ್ಥೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು. 

ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ  ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದಕ್ಕಾಗಿ ನಿಮಗೆ ಅಭಿನಂದನೆಗಳು. ಕಳೆದ ಕೆಲವು ವರ್ಷಗಳಿಂದ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಂದ ನಮ್ಮ ಶಕ್ತಿ ಸಂಸ್ಥೆಗಳು ಪ್ರಸಿದ್ಧಿಯನ್ನು ಪಡೆದಿವೆ. ಈ ವರ್ಷ ಪರೀಕ್ಷೆಯಲ್ಲಿ ನೀವೂ ಕೂಡಾ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಹೆತ್ತವರಿಗೆ ಮತ್ತು ನಮ್ಮ ಸಂಸ್ಥೆಗೆ ಇನ್ನಷ್ಟು ಕೀರ್ತಿ ಬರುವಂತಾಗಲಿ ಎಂದು ಹಾರೈಸಿದರು. 

ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿ ಮನರಂಜನಾ ಕಾರ್ಯಕ್ರಮ ನೀಡಿದರು.