ಮುಂಬಯಿ: ಅಸಾಧ್ಯ ಸಾಧಕ ಶ್ರೀ ಆಂಜನೇಯನ ಸಾಹಸ ಗಾಥೆ ಸುಂದರಕಾಂಡ - ಸರ್ವಾಂಗ ಸುಂದರವಾಗಿ ಮುಂಬಯಿ ಮಹಾನಗರದಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ಗೋಕುಲ  ತಲೆಯೆತ್ತಿ ನಿಂತಿದೆ. ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,  ಉಡುಪಿ ಪಲಿಮಾರು ಮಠ.  


ಶತಮಾನ ಸಂಭ್ರಮದಲ್ಲಿರುವ ಬಿ.ಎಸ್.ಕೆ.ಬಿ. ಎಸೋಸಿಯೇಶನ್,ಗೋಕುಲ ಸಾಯನ್, ತನ್ನ ಶತಮಾನೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಉತ್ಸವದ ಅಂಗವಾಗಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಹಯೋಗದೊಂದಿಗೆ, ರವಿವಾರ ಡಿ. 21 ರಿಂದ ಶನಿವಾರ  ಡಿ. 27 ರ ವರೆಗೆ ಪಲಿಮಾರು ಹಿರಿಯ ಸ್ವಾಮೀಜಿ ಪರಮ ಪೂಜ್ಯ  ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಶ್ರೀ ಪರಮಪೂಜ್ಯ  ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರಿದ ರಾಮಾಯಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರತಿದಿನ ಸಂಜೆ 5 ಗಂಟೆಯಿಂದ  7 ಗಂಟೆಯವರೆಗೆ  ನಡೆದ ಪ್ರವಚನದಲ್ಲಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅತ್ಯಂತ ಸುಂದರವಾಗಿ ರಾಮಾಯಣದ ಸುಂದರಕಾಂಡದ ಸುಧಾರಸದೌತಣವನ್ನು ಭಕ್ತಾದಿಗಳಿಗೆ  ಉಣಬಡಿಸಿದರು. 

ಪ್ರವಚನದ ಪ್ರಥಮ ದಿನವಾದ ರವಿವಾರ ಡಿ. 21 ರಂದು ಗೋಕುಲಕ್ಕೆ ಆಗಮಿಸಿದ ಯತಿದ್ವಯರನ್ನು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಮತ್ತು ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಪದಾಧಿಕಾರಿಗಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ದೇವಾಲಯಕ್ಕೆ ಕರೆತಂದರು. ಶ್ರೀ  ಗೋಪಾಲಕೃಷ್ಣನಿಗೆ ಆರತಿ ಬೆಳಗಿ ವೇದಿಕೆಗೆ ಆಗಮಿಸಿದ ಯತಿದ್ವಯರನ್ನು  ಅಧ್ಯಕ್ಷ ಡಾ. ಸುರೇಶ್ ರಾವ್, ಭಕ್ತಿ ಪೂರ್ವಕವಾಗಿ ಸ್ವಾಗತಿಸುತ್ತಾ, ರಾಮಾಯಣದ ಸುಂದರಕಾಂಡದ ರಸಾಮೃತವನ್ನು ಭಕ್ತಾದಿಗಳಿಗೆ ವರ್ಣಿಸಿ ಪುನೀತರನ್ನಾಗಿಸಬೇಕೆಂದು ಪ್ರಾರ್ಥಿಸಿದರು. ಮುಲುಂಡ್ ಸತ್ಯಧ್ಯಾನ ಪೀಠದ ಕುಲಪತಿಗಳಾದ ವಿದ್ವಾನ್ ಮಾಹುಲಿ ವಿದ್ಯಾಸಿಂಹ ಆಚಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತಿದಿನವೂ ಕಿರಿಯ ಸ್ವಾಮಿಗಳು  ನೀತಿಕಥೆಗಳನ್ನು ಪೌರಾಣಿಕ ಕತೆ, ಉದಾಹರಣೆಗಳೊಂದಿಗೆ ಭಕ್ತಾದಿಗಳಿಗೆ ತಿಳಿಸಿದರು. ಶ್ರೀ ಶ್ರೀಯವರು ಪ್ರಥಮ ದಿನದಲ್ಲಿ ರಾಮಾಯಣದ ಮೊದಲಿನ ನಾಲ್ಕು ಕಾಂಡಗಳ ಬಗ್ಗೆ ಮಾತನಾಡಿ ನಂತರ ಏಳು ದಿನಗಳ ಕಾಲ ಐದನೆಯ ಕಾಂಡವಾದ ಸುಂದರ ಕಾಂಡದ ಸಾರಾಮೃತವನ್ನು  ಅದ್ಭುತವಾಗಿ ವರ್ಣರಂಜಿತವಾಗಿ ಮನಮುಟ್ಟುವಂತೆ ಪ್ರವಚನ ಗೈದರು. 

ಈ ಮಧ್ಯೆ ಮಂಗಳವಾರ ದಿನಾಂಕ  23.12.2025 ರಂದು ಗೋಕುಲಕ್ಕೆ ಆಗಮಿಸಿದ  ಭೀಮನಕಟ್ಟೆ ಮಠಾಧೀಶ  ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿಯವರನ್ನು ಪದಾಧಿಕಾರಿಗಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಫಲಕಾಣಿಕೆಯನ್ನಿತ್ತು ಅನುಗ್ರಹ ಪಡೆದರು.  ಶ್ರೀ ಗೋಪಾಲಕೃಷ್ಣ ದೇವರಿಗೆ ಆರತಿಯನ್ನು ಬೆಳಗಿ, ವೇದಿಕೆಗೆ ಆಗಮಿಸಿದ ಶ್ರೀ ಶ್ರೀಯವರು, ಇಂದು ವಿಷ್ಣು ಪಾದವನ್ನು ಸೇರಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥರ ಆರನೆಯ ಆರಾಧನಾ ದಿನವೆಂದು  ಪರಮಪೂಜ್ಯರನ್ನು ಭಕ್ತಿಯಿಂದ ಸ್ಮರಿಸುತ್ತ ನುಡಿ ನಮನ ಗೈದು, ಭೀಮನಕಟ್ಟೆ ಮಠದ ಪೌರಾಣಿಕ ಇತಿಹಾಸವನ್ನು ತಿಳಿಸುತ್ತಾ,  ಭಕ್ತಾದಿಗಳನ್ನು ಅನುಗ್ರಹಿಸಿದರು.  

ಕೊನೆಯ ದಿನವಾದ ಶನಿವಾರ ಡಿ. 27 ರಂದು ತಮ್ಮ ಪ್ರಗಲ್ಭ ಪಾಂಡಿತ್ಯ ಪ್ರವಚನವನ್ನು ಮುಂದುವರಿಸುತ್ತಾ ಪ.ಪೂ. ಶ್ರೀ ಶ್ರೀ ವಿದ್ಯಾಧೀಶ ತೀರ್ಥರು,  "ಸುಂದರ  ಕಾಂಡ ಅಂದರೆ ಹನುಮಂತದೇವರು ಅತ್ಯಂತ ಸಾಹಸದಿಂದ  ಸೀತಾದೇವಿಯನ್ನು ಪತ್ತೆ ಹಚ್ಸಿ, ಶ್ರೀ ರಾಮನಿಗೆ ನಿವೇದನೆ ಮಾಡಿ ಇಡೀ  ಕಿಷ್ಕಿಂಧೆಗೆ, ಶ್ರೀ ರಾಮನ ಪರಿವಾರಕ್ಕೆ  ಆನಂದವನ್ನು ಉಂಟುಮಾಡಿದ ಪರ್ವ.  ವಿಚ್ಚಿನ್ನವಾದ ಎರಡು ಸಂಬಂಧಗಳು ಒಂದು ರೀತಿಯಲ್ಲಿ  ಒಟ್ಟುಗೂಡಿದ ಘಟನೆಯನ್ನು ಸುಂದರವಾಗಿ  ವರ್ಣಿಸಿದ ಕಾಂಡ,  ಇದೇ ಸುಂದರ ಕಾಂಡ. ಇದು ಅತಿ ಸುಂದರ.  ಅಸಾಧ್ಯ ಸಾಧಕ ಹನುಮಂತ ದೇವರು, ಶ್ರೀ ರಾಮನಿಂದ ಆಜ್ಞಪ್ತರಾಗಿ, ನೂರು ಯೋಜನ ಲಂಘಿಸಿ,  ಲಂಕೆಗೆ ಹೋಗಿ ಸೀತಾದೇವಿಗೆ ಉಂಗುರವನ್ನು ಕೊಟ್ಟು, ಸೀತಾದೇವಿ ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಸಮರ್ಪಣೆ ಮಾಡಿದ  ಅಮಿತ ಪರಾಕ್ರಮದ ಇಡೀ  ಅಧ್ಯಾಯ ಸುಂದರ ಕಾಂಡ. ನಮ್ಮ ಕಷ್ಟ  ಕಾರ್ಪಣ್ಯಗಳನ್ನು  ಹನುಮಂತ ದೇವರಲ್ಲಿ ನಿವೇದಿಸಿಕೊಂಡರೆ ಅವರು  ಸಲೀಲವಾಗಿ ಸಮುದ್ರವನ್ನು ದಾಟಿದ ಹಾಗೆ ನಮ್ಮ ಭವಸಾಗರವನ್ನು ದಾಟಿಸುತ್ತಾರೆ. ಡಾ. ಸುರೆಶ್ ರಾವ್ ಮತ್ತು ಗೋಕುಲದ  ವ್ಯವಸ್ಥಾಪಕ ಮಂಡಳಿ,  ಶ್ರೀ  ಗೋಪಾಲಕೃಷ್ಣ ಸನ್ನಿಧಾನದಲ್ಲಿ  ಏಳು ದಿನಗಳ ತನಕ  ರಾಮಾಯಣ ಪ್ರವಚನ ನಮ್ಮಿಂದ ಮಾಡಿಸಲಿಕ್ಕೆ ಒಳ್ಳೆಯ ವ್ಯವಸ್ಥೆಯನ್ನು ಮಾಡಿ ಅವಕಾಶ ಮಾಡಿಕೊಟ್ಟಿದ್ದಾರೆ   ಏಳು ದಿನಗಳ ಕಾಲ ನಮ್ಮ ಪಟ್ಟದ ದೇವರು ಶ್ರೀ ರಾಮ ದೇವರು ಗೋಕುಲದಲ್ಲಿ ನೆಲೆ ನಿಂತು ಪೂಜಾದಿಗಳನ್ನು  ಸ್ವೀಕಾರ ಮಾಡಿದ್ದಾರೆ. ರಾಮಕೃಷ್ಣರು ಒಂದಾಗಿ ಈ ಪುಣ್ಯಕ್ಷೇತ್ರದಲ್ಲಿ  ನೆಲೆ ನಿಂತು ಭಕ್ತಾದಿಗಳಿಂದ ಸೇವೆ ಸ್ವೀಕರಿಸಿ ಅನುಗ್ರಹಿಸಿ, ಗೋಕುಲವನ್ನು ಪಾವನಗೊಳಿಸಿದ್ದಾರೆ.   ಸಂಸ್ಥೆಗೆ ನೂರು ವರ್ಷದ ಸಂಭ್ರಮವೀಗ. ಸುಂದರ ಕಾಂಡಕ್ಕೂ ನೂರರ ಸಂಭ್ರಮದ ಗೋಕುಲಕ್ಕೂ  ಏನು ಸಂಬಂಧವೋ ಗೊತ್ತಿಲ್ಲ. ಹನುಮಂತ ದೇವರು ನೂರು ಯೋಜನ ಹಾರಿ ಸಮುದ್ರವನ್ನು ದಾಟಿ  ಲಂಕೆಯನ್ನು ಸೇರಿ ಸೀತಾನ್ವೇಷಣೆ ಮಾಡಿ ಕಾರ್ಯ ಸಾಧಿಸಿದ ಹಾಗೆ,  ನೂರು ವರ್ಷದಲ್ಲಿ ನೂರಾರು  ಎಡರು ತೊಡರುಗಳನ್ನು  ಮೆಟ್ಟಿ ನಿಂತು, ನೂರು ವರ್ಷ ಪೂರೈಸಿ  ಗೋಕುಲ ಇಂದು  ಸಮೃದ್ಧವಾಗಿ ಬೆಳೆದು ನಿಂತಿದೆ. ಸಾಮಾನ್ಯವಾಗಿ  ನೂರು ವರ್ಷ ಅಂದರೆ ಜೀರ್ಣಾವಸ್ಥೆಯಲ್ಲಿರಬೇಕಿತ್ತು. ಆದರೆ ಗೋಕುಲ ಇಂದು ಸರ್ವಾಂಗ ಸುಂದರವಾಗಿ ಮುಂಬಯಿ ಮಹಾನಗರದಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ತಲೆಯೆತ್ತಿ ನಿಂತಿದೆ  ಅಂದರೆ ಇದು ಖಂಡಿತಾ  ಶ್ರೀ ಮುರಳಿಲೋಲ ಶ್ರೀ ಗೋಪಾಲಕೃಷ್ಣನ ದಿವ್ಯಾನುಗ್ರಹದಿಂದ.  ಗೋಕುಲ  ಇನ್ನೂ ತುಂಬಾ ಚೆನ್ನಾಗಿ ಪ್ರಗತಿ ಹೊಂದಲಿ, ಧಾರ್ಮಿಕ, ಸಾಂಸ್ಕೃತಿಕ  ವೈಭವ ನಿರಂತರ ಇಲ್ಲಿ ನಿರಂತರ  ನಡೆಯುತ್ತಿರಲಿ, ಡಾ.ಸುರೇಶ ರಾವ್ ಮತ್ತು ಅವರ ತಂಡದ ಭಗೀರಥ ಪ್ರಯತ್ನ, ಸದಸ್ಯರೆಲ್ಲರ  ಸಹಕಾರ  ಹೀಗೆಯೇ ಮುಂದುವರೆಯುತ್ತಿರಲಿ,  ಎಲ್ಲರಿಗೂ ಶ್ರೀ ಕೃಷ್ಣಾನುಗ್ರಹ ಸದಾ ಇರಲಿ ಎಂದು  ಪ್ರಾರ್ಥಿಸುತ್ತೇವೆ"  ಎಂದು ಭಕ್ತಾದಿಗಳನ್ನು ಅನುಗ್ರಹಿಸಿದರು. 

ನಂತರ ಡಾ. ಸುರೇಶ್ ರಾವ್ ದಂಪತಿ  ಉಭಯ ಶ್ರೀ ಶ್ರೀಯವರ ಪಾದ ಪೂಜೆ ಗೈದು ಫಲ ಕಾಣಿಕೆಗಳನ್ನಿತ್ತು, ಶ್ರೀ ಶ್ರೀಯವರಿಂದ ಫಲ ಮಂತ್ರಾಕ್ಷತೆ ಪಡೆದು ಅನುಗ್ರಹಿತರಾದರು. 

ಅಂದು ವಿಶೇಷವಾಗಿ ಶ್ರೀ ಶ್ರೀಯವರ ಪಟ್ಟದ ದೇವರು ಶ್ರೀ ರಾಮದೇವರಿಗೆ ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದ ತೀರ್ಥ ಮಂಟಪದಲ್ಲಿ ಉಭಯ ಶ್ರೀಪಾದರಿಂದ ಪೂಜೆ ನೆರವೇರಿತು. ತದನಂತರ ಯತಿದ್ವಯರು ಶ್ರೀ ಗೋಪಾಲಕೃಷ್ಣನಿಗೆ ಪೂಜೆ ನೆರವೇರಿಸಿ, ಸರ್ವರಿಗೂ ಫಲ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಡಾ. ಸುರೆಶ್ ರಾವ್, ಧಾರ್ಮಿಕ ಪ್ರವಚನವನ್ನಿತ್ತು ತಮ್ಮನ್ನೆಲ್ಲಾ ಅನುಗ್ರಹಿಸಿದ  ಪರಮಪೂಜ್ಯರಿಗೆ, ಹಾಗೂ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನಕ್ಕೆ  ಕ್ಲಪ್ತ ಕಾಲಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಧನ್ಯವಾದ ಸಮರ್ಪಿಸಿದರು.

ಈ ಏಳು ದಿನಗಳ ಅವಧಿಯಲ್ಲಿ, ಶತಮಾನೋತ್ಸವಾಚರಣೆಯ ವರ್ಷದಲ್ಲಿ ಹೆಚ್ಚಿನ  ಸೇವೆಯನ್ನು ಸಲ್ಲಿಸಿದವರಿಗೆ ಶ್ರೀ ಶ್ರೀಯವರ ಸಮ್ಮುಖದಲ್ಲಿ ಫಲ ಮಂತ್ರಾಕ್ಷತೆ ನೀಡಿ, ಶಾಲು ಹೊದಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಪದಾಧಿಕಾರಿಗಳು ಹಮ್ಮಿಕೊಂಡಿದ್ದರು.  ಪ್ರವಚನದ ಅವಧಿಯಲ್ಲಿ ಭಕ್ತಾದಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಆಹಾರ ಸಮಿತಿ ಏರ್ಪಡಿಸಿತ್ತು.