ಮಂಗಳೂರು: 900 ವರ್ಷಗಳ ಇತಿಹಾಸವಿರುವ ಮಂಗಳೂರಿನ ಕೊಂಚಾಡಿ ಮಂದಾರಬೈಲು ಶ್ರೀ ದುರ್ಗಾ ಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಫೆಬ್ರವರಿ 11ನೇ (ಶನಿವಾರ) ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವು ವಿದ್ವಾನ್ ಡಾ. ಬಿ. ಗೋಪಾಲ ಆಚಾರ್ ಉಡುಪಿ ಇವರ ನೇತೃತ್ವದಲ್ಲಿ ವೈಭವದಿಂದ ಜರಗಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಗುರುಪ್ರಸಾದ್ ಕಡಂಬಾರ್ ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಫೆ 9 ರಂದು ಕ್ಷೇತ್ರದ ತಂತ್ರಿಗಳಾದ ವೇದವಿದ್ಯಾಭೂಷಣ ಬ್ರಹ್ಮಶ್ರೀ ಶ್ರೀ ವಿಠಲದಾಸ ತಂತ್ರಿ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಗನಯಾಗ ಮತ್ತು ಏಕಾದಶ ರುದ್ರಾಭಿಷೇಕ ನಡೆಯಲಿರುವುದು. ಫೆ 10 ರಂದು ಶತ ಚಂಡಿಕಾ ಯಾಗವು ನಡೆಯಲಿದ್ದು ಮೂರೂ ದಿನವೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.
ಫೆ 9 ರಂದು ಮದ್ಯಾಹ್ನ 3 ಗಂಟೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಹೊರೆಕಾಣಿಕೆಗಳು ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ಬಂದು ಸೇರಲಿದೆ. ಫೆ 11 ರಂದು ಮಧ್ಯಾಹ್ನ 3 ಗಂಟೆಗೆ ಕಲ್ಯಾಣೋತ್ಸವದ ದಿಬ್ಬಣ ಮೆರವಣಿಗೆ ನಡೆಯಲಿದ್ದು ಸಂಜೆ 6 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವವು ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದವರು ವಿವರಿಸಿದರು.
ಮೊದಲ ದಿನ ಸಂಜೆ 7 ಗಂಟೆಗೆ ಸನಾತನ ನಾಟ್ಯಾಲಯದ ಕಲಾವಿದರಿಂದ ಸನಾತನ ನಾಟ್ಯಾಂಜಲಿ ನೃತ್ಯ ನಡೆಯಲಿದ್ದು, ಎರಡನೇ ದಿನ ಸಂಜೆ 5 ಗಂಟೆಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಹಾಗೂ ಮೂರನೇ ದಿನ ಮಧ್ಯಾಹ್ನ 12.30ಕ್ಕೆ ಯಜ್ಞೇಶ್ ಆಚಾರ್ಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಬಳಗದಿಂದ 'ಭಕ್ತಿ ಸಂಗೀತ ಲಹರಿ' ನಡೆಯಲಿರುವುದು ಎಂದು ತಿಳಿಸಿದರು.
ಒಂಬತ್ತು ಶತಮಾನಗಳಿಂದ ಹನ್ನೊಂದು ಸನ್ನಿಧಾನಗಳೊಂದಿಗೆ ಪೂಜೆಗೊಳ್ಳುತ್ತಿರುವ ಪುಣ್ಯಕ್ಷೇತ್ರವಾಗಿರುವ ಕ್ಷೇತ್ರ ಶ್ರೀ ಮಂದಾರಬೈಲು ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನವಾಗಿದೆ.
ಅರ್ಚಕರ ಕುಟುಂಬವೊಂದರಿಂದ ಷಡಾಯತನ ಪೂಜಾ ಪರಂಪರೆಯೊಂದಿಗೆ ಐದು ದೈವಗಳ ಆರಾಧನೆಯನ್ನು ನಡೆಸುತ್ತಿದ್ದ ಶ್ರೀ ಕ್ಷೇತ್ರವು 2014ನೇ ಇಸವಿಯಿಂದೀಚೆಗೆ ಸಾರ್ವಜನಿಕ ಆರಾಧನಾ ಕ್ಷೇತ್ರವಾಗಿ ಜೀರ್ಣೋದ್ಧಾರಗೊಂಡು ಆಸ್ತಿಕರಿಗೆ ಆಸರೆಯಾಗಿ ಆಕರ್ಷಿಸುತ್ತಿದೆ. ಕ್ಷೇತ್ರದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವು ಭೂವೈಕುಂಠವೆಂದೇ ಖ್ಯಾತಿವೆತ್ತಿರುವ ತಿರುಪತಿ ಕ್ಷೇತ್ರದಿಂದ ನೀಡಿದ ವಿಶೇಷ ಮೂರ್ತಿಯಾಗಿದ್ದು ಶ್ರೀನಿವಾಸ ಕಲ್ಯಾಣ ಉತ್ಸವ ನಡೆಸಬೇಕೆಂಬುದು ಪ್ರತಿಷ್ಠಾ ಸಂದರ್ಭದ ದೈವ ಪ್ರೇರಣೆಯಾಗಿದೆ. ಕಲಿಯುಗದಲ್ಲಿ ಶ್ರೀಹರಿಯು ಭೂಮಿಯಲ್ಲಿ ಶ್ರೀನಿವಾಸನಾಗಿ ಅವತರಿಸಿ ಪದ್ಮಾವತಿಯನ್ನು ವರಿಸುವ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ದೇವಾನುದೇವತೆಗಳು ನಭೋಮಂಡಲದಲ್ಲಿ ನೆರೆದರಂತೆ, ಹೂಮಳೆಗರೆದರ೦ತೆ.
ಭಗವಂತನ ಕಲ್ಯಾಣೋತ್ಸವವನ್ನು ಕಂಡು ಧನ್ಯರಾಗುವ ಭಾಗ್ಯ ಮಂದಾರಬೈಲು ಶ್ರೀ ದುರ್ಗಾ ಪರಮೇಶ್ವರಿ ವೆಂಕಟರಮಣ ಕ್ಷೇತ್ರದ ಭಕ್ತರಿಗೆ ಒದಗಿ ಬಂದಿದೆ ಎಂದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾರದಾ ಶಿಕ್ಷಣ ಸಮೂಹಗಳ ಅಧ್ಯಕ್ಷ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಡಾ. ಎಂ. ಬಿ ಪುರಾಣಿಕ್ ತಿಳಿಸಿದರು.
ಫೆ 9 ರಂದು 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಮೋಕ್ತೇಸರ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಕ್ಷೇತ್ರದ ತಂತ್ರಿಗಳು ಮತ್ತು ಮಾರ್ಗದರ್ಶಕರಾದ ಬ್ರಹ್ಮಶ್ರೀ ವಿಠಲದಾಸ ತಂತ್ರಿ, ಆಶೀರ್ವಚನ ಮಾಡುವರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಧ್ಯಕ್ಷ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಜಯಾನಂದ ಅಂಚನ್, ಮಹಾಪೌರರು, ಮ.ನ.ಪಾ, ಮಂಗಳೂರು, ಮಾಜಿ ಸಚಿವರು ಕೃಷ್ಣ ಜೆ. ಪಾಲೆಮಾರ್, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯಂ.ಬಿ. ಪುರಾಣಿಕ್ ಭಾಗವಹಿಸುವರು ಎಂದು ಗುರುಪ್ರಸಾದ್ ತಿಳಿಸಿದರು.
ಪ್ರಕಾಶ್ ರಾವ್ ಕಲಾವಿ, ಉದ್ಯಮಿಗಳು, ಸಾಂಬಶಿವ ರಾವ್, ನಿರ್ದೇಶಕರು, ಅನಘಾ ರಿಫೈನರೀಸ್, ಬೈಕಂಪಾಡಿ,ಶಶಿಧರ್ ಹೆಗ್ಡೆ, ಕಾರ್ಪೋರೇಟರ್, ಮ.ನ.ಪಾ.,ರಂಜಿಸಿ ಕೋಟ್ಯಾನ್, ಕಾರ್ಪೋರೇಟರ್, ಮ.ನ.ಪಾ., ಜೆ. ಬಾಲಕೃಷ್ಣ ಕೊಟ್ಟಾರಿ, ಮೋಕ್ತಸರರು( ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ಕೊಂಚಾಡಿ),ಉದ್ಯಮಿ ಕೆ. ಕೃಷ್ಣ ಭಟ್, ತಿರುಪತಿ, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿಯ ಅಧ್ಯಕ್ಷ ದುರ್ಗಾದಾಸ್ ಇರ್ವತ್ತಾಯ, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿ ಕಾರ್ಯಧ್ಯಕ್ಷ ಲಕ್ಷ್ಮಣ್ ದೇವಾಡಿಗ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ವಿವಿಧ ರೀತಿಯ ಸೇವೆಗಳನ್ನು ಮಾಡಲು ಅವಕಾಶವಿದ್ದು ಆಸಕ್ತರು ಸಮಿತಿಯ ಗುರುಪ್ರಸಾದ್ ಕಡಂಬಾರ್ ಅವರನ್ನು 9380999424 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ಪತ್ರಿಕಾ ಗೋಷ್ಠಿಯಲ್ಲಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾರದಾ ಶಿಕ್ಷಣ ಸಮೂಹಗಳ ಅಧ್ಯಕ್ಷ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಡಾ. ಎಂ. ಬಿ ಪುರಾಣಿಕ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿಯ ಮಾಧ್ಯಮ ಸಮಿತಿ ಸಂಚಾಲಕ ಆನಂದ್ ಕೆ, ಸಮಿತಿ ಅಧ್ಯಕ್ಷ ದುರ್ಗಾದಾಸ್ ಇರ್ವತ್ರಾಯ, ಕಾರ್ಯಾಧ್ಯಕ್ಷ ಲಕ್ಷ್ಮಣ ದೇವಾಡಿಗ, ಉಪಾಧ್ಯಕ್ಷ ಪ್ರಸನ್ನ ರಾವ್, ಮಾಧ್ಯಮ ಸಮಿತಿ ಸಹ ಸಂಚಾಲಕ ಕಾ.ವೀ.ಕೃಷ್ಣದಾಸ್, ಸಹ ಕೋಶಾಧಿಕಾರಿ ವೆಂಕಟರಮಣ ಶೆಟ್ಟಿಗಾರ್, ಉಪಾಧ್ಯಕ್ಷ ಗೋಪಾಲ ಕೃಷ್ಣ ಭಟ್ ಮಂದಾರಬೈಲು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಉಪಸ್ಥಿತರಿದ್ದರು.