ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ಜಿಲ್ಲೆಯು ಪ್ರಸ್ತುತ ಮತ್ತೊಂದು ವಿನೂತನ ಸ್ವಚ್ಛತಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಗೆ ಜಿಲ್ಲಾಧಿಕಾರಿಗಳ ವಸತಿಗೃಹ ಸಾಕ್ಷಿಯಾಗಿದೆ.

ಮನೆಯ ಕಾಂಪೌ0ಡ್ ನಲ್ಲಿ ಬೀಳುವ ಒಣಕಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಉಡುಪಿ ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದ್ದು, ವಸತಿಗೃಹದಲ್ಲಿನ ಕೈ ತೋಟದ ಒಣ ಹುಲ್ಲು, ತೋಟದ ಗಿಡಗಳಿಂದ ಬಿದ್ದಿದ್ದ ಗಿಡದ ಎಲೆಗಳು, ಮರದ ಮೇಲಿಂದ ಬಿದ್ದ ಒಣ ಎಲೆಗಳನ್ನು ಒಟ್ಟುಗೂಡಿಸಿ, “ಡ್ರೈ ಲೀವ್ಸ್  ಕಂಪೋಸ್ಟ್ ಬೆಡ್” ನಿರ್ಮಾಣ ಮಾಡಲಾಗಿದೆ.

ಕಾಂಪೌ0ಡ್ ನಲ್ಲಿ ಸಂಗ್ರಹಿಸಲಾದ ಎಲೆ ಮತ್ತು ಹುಲ್ಲನ್ನು ಸೆಗಣಿಯೊಂದಿಗೆ ಮಿಶ್ರಣ ಮಾಡಿ, 10*6 ಅಳತೆಯ ಬೆಡ್ ಮಾದರಿಯಲ್ಲಿ ಜೋಡಿಸಲಾಗಿದ್ದು,ಗೋಣಿಚೀಲದ ಹೊದಿಕೆ ಹಾಕಲಾಗಿದೆ.ಪ್ರತಿ ದಿನ ದಿನ ಈ ಬೆಡ್ ಮೇಲೆ ನೀರಿನ ಸಿಂಪಡಣೆ ಮಾಡಬೇಕಿದ್ದು, ಇದು 45 ದಿನಗಳ ಬಳಿಕ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಗೊಳ್ಳಲಿದೆ. ಇದನ್ನು ಕೈ ತೋಟದಲ್ಲಿನ ಗಿಡಗಳಿಗೆ ಬಳಸಬಹುದು ಅಥವಾ ಅದೇ ಗೊಬ್ಬರದ ಬೆಡ್ ನಲ್ಲಿ ಬೀಜಗಳನ್ನು ನಡೆಸು ಮೂಲಕ ಗಿಡಗಳನ್ನು ಬೆಳಸಲು ಸಾದ್ಯವಾಗಲಿದೆ. ಎಲ್ಲದಕ್ಕೂ ಮುಖ್ಯವಾಗಿ ಮನೆಯ ಆವರಣವು ಕಸದಿಂದ ಮುಕ್ತವಾಗಿ ಸ್ವಚ್ಛತೆಯಿಂದ ಕಂಗೊಳಿಸಲಿದೆ.

ಈಗಾಗಲೇ ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ಹಸಿ ಕಸ ನಿರ್ವಹಣೆಗೆ ಡ್ರಮ್ ಕಾಂಪೋಸ್ಟ್ ವಿಧಾನವನ್ನು ಅಳವಡಿಸಿಕೊಂಡಿದ್ದು, ಪ್ರಸ್ತುತ ಒಣ ಕಸ ನಿರ್ವಹಣೆ ಸಹ ಯಶಸ್ವಿಯಾಗಿ ಅನುಷ್ಠಾನಗೊಳ್ಳುವ ಮೂಲಕ ಮಾದರಿ ವಸತಿಗೃಹವಾಗಿ ಪರಿವರ್ತನೆಯಾಗಿದೆ.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅವರ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರ ನಿವಾಸದ ಕೈ ತೋಟದಲ್ಲಿ SLRM ಸ್ವಚ್ಛತಾ ಕಾರ್ಯಕರ್ತರು ಈ ವಿನೂತನ ಕಂಪೋಸ್ಟ್ ಬೆಡ್ ನಿರ್ಮಾಣ ಮಾಡಿದ್ದಾರೆ. ಈ ಮಾದರಿ ಬಗ್ಗೆ SLRM ನ ಸ್ವಚ್ಛತಾ ಕಾರ್ಯಕರ್ತರು ವೆಲ್ಲೊರ್ ಶ್ರೀನಿವಾಸನ್ ಇವರಿಂದ ತರಬೇತಿ ಪಡೆದಿರುತ್ತಾರೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕರಾದ ರಘುನಾಥ್ ಇವರು ಮಾರ್ಗದರ್ಶನ ನೀಡಿದ್ದಾರೆ.

ಮನೆಯ ಆವರಣದಲ್ಲಿ ಬೀಳುತಿದ್ದ ಒಣಕಸವನ್ನು ಸಂಪನ್ಮೂಲವಾಗಿ ಬಳಕೆ ಮಾಡಬಹುದು ಎಂಬುದಕ್ಕೆ ಡ್ರೈ ಲೀವ್ಸ್ ಕಂಪೋಸ್ಟ್  ಬೆಡ್ ಮಾದರಿಯಾಗಿದೆ. ಸಾರ್ವಜನಿಕರೂ ಸಹ ತಮ್ಮ ಮನೆಗಳ ಕೌಂಪೌ0ಡ್ ನಲ್ಲಿ ಬೀಳುವ ಒಣ ಕಸವನ್ನು ಸುಡುವುದು ಅಥವಾ ಬಿಸಾಡುವುದು ಮಾಡದೇ ಈ ರೀತಿಯಾಗಿ ವ್ಯವಸ್ಥಿತವಾಗಿ ಮರು ಬಳಕೆ ಮಾಡಿಕೊಳ್ಳಬಹುದಾಗಿದೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಜಿಲ್ಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಈಗಾಗಲೇ ಹಲವು ವಿಧಾನಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು,ವಿನೂತನ ಡ್ರೈ ಲೀವ್ಸ್ ಕಂಪೋಸ್ಟ್ ಬೆಡ್ ಮಾದರಿಯನ್ನು ಸರಕಾರಿ ಅಧಿಕಾರಿಗಳ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಸಾರ್ವಜನಿಕರಿಗೆ ಪ್ರೇರಣೆ ನೀಡಬೇಕು ಎನ್ನುವ ಉದ್ದೇಶದಿಂದ,  ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರ ವಸತಿಗೃಹದಲ್ಲೇ ಪ್ರಥಮವಾಗಿ ಅಳವಡಿಸಲಾಗಿದೆ. ಮುಂದುವರೆದು ಈ ಮಾದರಿಯನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ , ಪ್ರಾಥಮಿಕ ಅರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಳವಡಿಸುವ ಚಿಂತನೆ ಇದೆ. ಸಾರ್ವಜನಿಕರು ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಜಿಲ್ಲೆಯ SLRM ನ ಸ್ವಚ್ಛತಾ ಕಾರ್ಯಕರ್ತರ ನೆರವು ಪಡೆಯಬಹುದಾಗಿದೆ.: ಪ್ರಸನ್ನ ಹೆಚ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್.ಉಡುಪಿ