ಮೂಡುಬಿದಿರೆಸಾಮಾನ್ಯವಾಗಿ ಯಕ್ಷರಂಗ ಪುರುಷರಿಗಷ್ಟೇ ಸೀಮಿತ ಎಂದಿದ್ದ ಕಾಲದಲ್ಲಿ ಸ್ತ್ರೀಯರೂ ಆಸಕ್ತಿ ಬೆಳೆಸಿಕೊಂಡಲ್ಲಿ ಮಿಂಚಬಲ್ಲರೆಂದು ಸಾಧಿಸಿ ತೋರಿಸಿದ ಮಹಿಳೆಯರಲ್ಲಿ ಕೆ ಕಲಾವತಿಯವರು ಓರ್ವರು. ಯಕ್ಷಕಲಾ ಮಹಿಳಾ ತಂಡ ಸುರತ್ಕಲ್ ಹಾಗೂ ಕಲಾ ರಾಧಕ ತಂಡ ಸುರತ್ಕಲ್ ಇವುಗಳ ತಾಳಮದ್ದಲೆಗಳಲ್ಲಿ ಭಾಗವಹಿಸಿ ಯಕ್ಷಗಾನದ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು ಕೆ ಕಲಾವತಿ. 

ಇವರಿಗೆ ದಿ. ವನಜಾಕ್ಷಿ ಅಮ್ಮ ಸಂಸ್ಮರಣ ಪ್ರಶಸ್ತಿ 2024 ದೊರೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕಿ ಪುರಸ್ಕೃತೆಯಾದ ಇವರು ಸುರತ್ಕಲ್ ಯಕ್ಷಕೂಟದ ಕಲಾವಿದೆಯೂ ಕೂಡ ಹೌದು.

ಕಾಸರಗೋಡಿನ ಬೇಳ ಗ್ರಾಮದ ದಾಮೋದರ ಶಾಸ್ತ್ರಿ ಸರಸ್ವತಿ ಅವರ ಮಗಳಾಗಿ 1954ರ ಅಕ್ಟೋಬರ್ 25ರಂದು ಜನಿಸಿದರು.

ಎರಡು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳಕೊಂಡು  ಬೇಳದ ಸೋದರತ್ತೆ ಪಾರ್ವತಿಯವರಲ್ಲಿ ಬೆಳೆದರು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು, ಪೆರಡಾಲ ಇಲ್ಲಿ ಶಿಕ್ಷಣವನ್ನು ಪೂರೈಸಿದರು. ತರುವಾಯ ಮಂಡ್ಯದ ಸಂತ ಜೋಸೆಫ್ ಕಾನ್ವೆಂಟ್  ನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದರು. ಈ ಮಧ್ಯೆ ಸೋದರತ್ತೆಯ ಮಗ ಕೃಷ್ಣಕುಮಾರ್ ರೊಂದಿಗೆ  ವಿವಾಹವು ನೆರವೇರಿತು.

ಸುರತ್ಕಲ್ ಹಿಂದು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಗೆ 1975 ಜುಲೈ 15ರಂದು ಸಹಶಿಕ್ಷಕಿಯಾಗಿ ಸೇರಿ 40 ವರ್ಷ ಶಿಕ್ಷಣ ಸೇವೆಯ ಬಳಿಕ 2014 ಅಕ್ಟೋಬರ್ 31ರಂದು ಮುಖ್ಯ ಶಿಕ್ಷಕಿ ಹುದ್ದೆಯಲ್ಲಿ ನಿವೃತ್ತಿಯನ್ನು ಪಡೆದರು.

ಶಿಕ್ಷಣ ಸೇವೆಯ ಜೊತೆ ಜೊತೆಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದ್ದು ಶಾಲಾ ಮಕ್ಕಳು ಬರೆಯುವ ಕಥೆ, ಕವನ, ಚುಟುಕು, ಗಾದೆ ಮಾತು ಇತ್ಯಾದಿಗಳನ್ನು ಸಂಗ್ರಹಿಸಿ ಮಕ್ಕಳ ಹೆಸರಲ್ಲಿ ಸಾಹಿತ್ಯ ಸಂಗಮದ ವತಿಯಿಂದ ಸಂಪಾದಿಸಿ ಸಮಾಜಕ್ಕೆ ನೀಡಿದ್ದಾರೆ.  ವಿಷಯದ ಟ್ರೈನರ್ ಆಗಿಯೂ ಹಲವಾರು ಮಂದಿಗೆ ಕಲಿಸಿದ್ದಾರೆ. ಸ್ವಂತ ಸಾಹಿತ್ಯ ಸೇವೆಯಲ್ಲಿ- ಪುಟ್ಟನ ಕನಸು, ತಪ್ಪು ಒಪ್ಪು , ಅರ್ಪಣೆ,, ಹಾಗೂ 2020ರಲ್ಲಿ ತಾಳಮದ್ದಲೆಯ ಐದು ಪ್ರಸಂಗಗಳನ್ನು ಪಂಚಾಮೃತ ಹೆಸರಲ್ಲಿ ಪ್ರಕಟಿಸಿದ್ದಾರೆ.

ಮಹಿಳಾ ಮಂಡಲ, ಭಜನಾ ಮಂಡಳಿಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಬಂಧ ಸ್ಪರ್ಧೆಗಳಲ್ಲಿ ಸತತವಾಗಿ ತಾಲೂಕು, ಜಿಲ್ಲೆ, ರಾಜ್ಯ ಪ್ರಶಸ್ತಿಗಳನ್ನು ಹಲವಾರು ಬಾರಿ ಪಡೆದಿದ್ದಾರೆ. 2014ರಲ್ಲಿ ದ ಕ ಜಿಲ್ಲಾ ಪ್ರಾಥಮಿಕ ಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಯಕ್ಷಕೂಟ

ಕಲಾವಿದ ಪ್ರಶಸ್ತಿ, 2023ರ ದ ಉಮನ್ ಆಫ್ ದಕ್ಷಿಣ ಕನ್ನಡ ಪ್ರಶಸ್ತಿಗಳೊಂದಿಗೆ  ಹಲವಾರು ಸಾಹಿತ್ಯ, ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಮಂಗಳೂರು, ಸುರತ್ಕಲ್ ನ ಹಲವಾರು ಸಾಹಿತ್ಯ, ಶೈ ಕ್ಷಣಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳ ಸದಸ್ಯರಾಗಿದ್ದು ಸದಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಖನ: ರಾಯಿ ರಾಜಕುಮಾರ್ ಮೂಡುಬಿದಿರೆ.