ಮಂಗಳೂರು, ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಇಂದು (ಶನಿವಾರ) ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಅಝ್ಹಾ’ (ಬಕ್ರೀದ್) ಆಚರಿಸಲಾಗುತ್ತಿದೆ.
ನಗರದ ಲೈಟ್ಹೌಸ್ ಹಿಲ್ ರಸ್ತೆಯಲ್ಲಿರುವ ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಮಜೀದ್ ಫಾಳಿಲಿ ಅವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಮಂಗಳೂರಿನ ಪಂಪ್ವೆಲ್ನ ಮಸ್ಜಿದುತ್ತಖ್ವಾ, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್ಬ್ಯಾಂಕ್ನ ಇಬ್ರಾಹೀಂ ಖಲೀಲ್ ಮಸ್ಜಿದ್, ಕಂಕನಾಡಿ ರಹ್ಮಾನಿಯಾ ಜುಮಾ ಮಸೀದಿ, ಬಂದರ್ ಕಚ್ಚೀ ಮೇಮನ್ ಜುಮಾ ಮಸ್ಜಿದ್, ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್, ಕುದ್ರೋಳಿ ಜಾಮೀಯಾ ಜುಮಾ ಮಸ್ಜಿದ್, ಬಿಕರ್ನಕಟ್ಟೆ ಅಹಸನುಲ್ ಮಸಾಜೀದ್ ಸಹಿತ ಜಿಲ್ಲೆಯ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿಸಲಾಯಿತು.ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.ಈ ಸಂದರ್ಭ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಸಿದ್ದಾರ್ಥ ಗೋಯಲ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಭೇಟಿ ನೀಡಿ ಶುಭ ಹಾರೈಸಿದರು.
ಉಡುಪಿ ನಗರ ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.