ಮಂಗಳೂರು, ಜನವರಿ 30: ಪ್ರಧಾನಿ, ರಾಷ್ಟ್ರಪತಿ ಯಾವ ಹುದ್ದೆಗೆ ಏರಲು ಕೂಡ ಗಾಂಧಿಯವರಿಗೆ ತಡೆ ಇರಲಿಲ್ಲ; ಆದರೆ ಸ್ವಾತಂತ್ರ್ಯ ಕೊಡಿಸುವ ಗುರಿ ಮುಟ್ಟಿದ ಮೇಲೆ ಅವರು ನಡೆದೇ ಬಿಟ್ಟರು. 

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಾತ್ಮಾ ಗಾಂಧಿಯವರ 73ನೇ ಪುಣ್ಯ ದಿನ ನೆನಪು ನಡೆಯಿತು. ಅದರ ನಡುವೆ ಕುದ್ಮುಲ್ ರಂಗರಾವ್ ಅವರ 93ನೇ ಪುಣ್ಯ ದಿನವನ್ನೂ  ನೆನಪಿಸಿಕೊಳ್ಳಲಾಯಿತು.

ದ. ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಭಾರತದಲ್ಲಿ ಹಾಗೂ ಜಗತ್ತಿನಲ್ಲಿ ಅತಿ ಹೆಚ್ಚು ಜನರಿಂದ ಗೌರವಿಸಲ್ಪಡುವ ಮತ್ತು ಪ್ರೀತಿಸಲ್ಪಡುವ ವ್ಯಕ್ತಿ ಗಾಂಧೀಜಿ. ಅವರನ್ನು ಸ್ವಾತಂತ್ರ್ಯ ದೊರೆತ ಬೆನ್ನಿಗೆ ನಮ್ಮವರೇ ಕೊಂದುದು ದುರಂತ. ಇಂದು ಕೊಲೆಗಾರ ಗೋಡ್ಸೆಯನ್ನು ಆರಾಧಿಸುವ ಜನರಿದ್ದಾರೆ, ಅದಕ್ಕೆ ಅವಕಾಶ ಆದುದು ಗಾಂಧಿ ಕೊಡಿಸಿದ ಸ್ವಾತಂತ್ರ್ಯ ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ಆದ ಬಳಿಕ ಮೊದಲ ಬಾರಿಗೆ ಕಚೇರಿಗೆ ಬಂದ ಐವಾನ್ ಡಿಸೋಜಾ ಮತ್ತು ಕೇರಳದಿಂದ ಬಂದ ಕಾಂಗ್ರೆಸ್ ನಾಯಕ ಜಿ. ಕೃಷ್ಣನ್ ಅವರನ್ನು ವಿಶೇಷವಾಗಿ ಸ್ವಾಗತಿಸಿದರು.

ಐವಾನ್ ಡಿಸೋಜಾ ಮಾತನಾಡಿ ನಡು ರಾತ್ರಿ ಹೆಣ್ಣು ಮಕ್ಕಳು ನಿರ್ಭೀತಿಯಿಂದ ತಿರುಗುವಂತಾದರೆ ಅದು‌ ನಾನು ಬಯಸಿದ ಸ್ವಾತಂತ್ರ್ಯ. ‌ಕಡೆಗಡನೆ ಕಂಡ ದಲಿತ ಗಲಿತರಿಗೆ ಸಕಲ ಸ್ಥಾನಮಾನ ದೊರೆಯುವಂತೆ ಮಾಡಿದ್ದು ಗಾಂಧಿ ಮತ್ತು ಕಾಂಗ್ರೆಸ್ ಎಂದರು.

ಜೆ. ಆರ್. ಲೋಬೋ ಮಾತನಾಡಿ ಇಂದಿನ ಬಿಜೆಪಿ ಸರಕಾರ ಬ್ರಿಟಿಷ್ ಸರ್ಕಾರದ ಪಳೆಯುಳಿಕೆ ಆಗಿದೆ. ರೈತರನ್ನು ದಮನಿಸುವ ಅವರ ನೀತಿ ಖಂಡನೀಯ. ಇಂದಿನ ಸ್ಥಿತಿಯಲ್ಲಿ ಗಾಂಧಿ ಮತ್ತೊಂದು ಬಾರಿ ಹುಟ್ಟಿ ಬರಲಿ ಎಂದು ಆಶಿಸದೆ ಬೇರೆ ದಾರಿ ಇಲ್ಲ ಎಂದರು.

ಮಾಜೀ ಮಂತ್ರಿ ಯು. ಟಿ. ಖಾದರ್, ಜಿ. ಕೃಷ್ಣನ್, ಮಿಥುನ್‌ ರೈ ಅವರುಗಳೂ ಮಾತನಾಡಿದರು.  ಸಭೆಯಲ್ಲಿ ಹಿಲ್ಡಾ ಆಳ್ವ, ಶಾಲೆಟ್ ಪಿಂಟೋ, ಅಬ್ದುಲ್ ರವೂಫ್, ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.