ಮಂಗಳೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ತೀವ್ರ ಪಕ್ಷ ನಿಷ್ಠರು, ಇದು ಪಕ್ಷಕ್ಕೂ ಗೊತ್ತಿದೆ, ನನಗೂ ಗೊತ್ತಿದೆ. ಕೆಲಸವಿದ್ದರೆ ಮಂಗಳೂರಿನ ಕಾರ್ಯಕರ್ತರು ಎಂದು ಕರೆ ಮಾಡಿ, ನೇರ ಬಂದರೆ ನನ್ನ ಕಚೇರಿ, ಮನೆ ನಿಮಗೆ ಸದಾ ತೆರೆದಿರುತ್ತದೆ ಎಂದು ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿಯವರು ಹೇಳಿದರು.
ಸರಕಾರಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿದ್ದ ಅವರು ಪಕ್ಷದ ಕಚೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ಪರಂಪರೆಯಂತೆ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು, ಅವರೊಡನೆ ಬೆರೆಯಲು ನಾನಿಲ್ಲಿಗೆ ಬಂದಿದ್ದೇನೆ. ಪ್ರವಾಹ, ಅತಿವೃಷ್ಟಿ ಮತ್ತು ಲೋಕ ಕಂಟಕ ಕೊರೋನಾದ ಕಾರಣ ರಾಜ್ಯದ ಅಭಿವೃದ್ಧಿ ಸ್ವಲ್ಪ ಹಿನ್ನಡೆ ಕಂಡಿದೆ. ಈ ಬಜೆಟ್ ಬಳಿಕ ರಾಜ್ಯದ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ ಎಂದು ಸವದಿ ಹೇಳಿದರು.
ಬಂದಿಳಿದಾಗ ಯುವ ಮೋರ್ಚಾ ಕಾರ್ಯಕರ್ತರು ನೀಡಿದ ಸ್ವಾಗತ ಅದ್ಭುತ, ಆ ಪ್ರೀತಿಗೆ ನಾನು ಅಬಾರಿ. ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಉದ್ಘಾಟನೆ, ಬಂಟ್ವಾಳ ಚಾಲಕ ಪಥ ಉದ್ಘಾಟನೆ ಇದೆ. ಅದಕ್ಕಿಂತ ಮುಖ್ಯವಾದುದು ಜಗತ್ತಿಗೆ ತುಳುನಾಡನ್ನು ವಿಶಿಷ್ಟವಾಗಿ ಪರಿಚಯಿಸುವ ಸಾಂಸ್ಕೃತಿಕ ಕ್ರೀಡೆ ಕಂಬಳದಲ್ಲಿ ಭಾಗವಹಿಸುವುದು ಎಂದರು.
ಕೊರೋನಾ ಕಾರಣ ಸಾರಿಗೆ ಇಲಾಖೆ ನಷ್ಟ ಕಂಡರೂ ಸರಕಾರದ ನೆರವು ಪಡೆದು ಸಂಬಳ ನೀಡಲಾಯಿತು. ಡಿಸೆಂಬರ್ ಅರ್ಧ ಸಂಬಳ ಕೊಟ್ಟರೂ ಉಳಿದರ್ಧ ಬೇಗನೆ ಕೊಡುತ್ತೇವೆ, ಕಾರ್ಮಿಕರು ವ್ಯಥಿತರಾಗಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ. ಕ. ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮೀನಾಕ್ಷಿ ಶಾಂತಿಗೋಡು, ಕಸ್ತೂರಿ ಪಂಜ ಮೊದಲಾದವರು ಇದ್ದರು.