ಉಜಿರೆ.ಅ.23:“ವ್ಯಸನ ಮುಕ್ತರಾಗ ಬಯಸುವವರಿಗೆ ಸ್ವಯಂ ಪ್ರೇರಣೆ ಅತ್ಯಗತ್ಯವಾಗಿದೆ. ಆದರೆ ಕೆಲವೊಮ್ಮೆ ಒತ್ತಾಯ ಪೂರ್ವಕವಾಗಿಯೂ ಮದ್ಯವರ್ಜನ ಶಿಬಿರಕ್ಕೆ ದಾಖಲಿಸುವ ಪ್ರಸಂಗ ಕುಟುಂಬದವರಿಗೆ ಬರುತ್ತದೆ. ಯಾವುದೇ ವ್ಯಸನವನ್ನು ವರ್ಜಿಸಬೇಕಾದರೆ ಕುಟುಂಬದವರ, ವೈದ್ಯರ, ಸಲಹೆಗಾರರ ಮತ್ತು ಅಗತ್ಯವಾಗಿ ವ್ಯಸನಿಯ ಅಂತರಂಗದ ಭಾವನೆಗಳಿಗೆ ಪ್ರೇರಣೆ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ. ವ್ಯಸನದದೈಹಿಕ ಮತ್ತು ಮಾನಸಿಕ ಅವಲಂಬನೆ ಬಹಳ ಕಠಿಣವಾಗಿದ್ದಾಗ ಬಿಡುವ ಸಂದರ್ಭದಲ್ಲಿ ವ್ಯಸನಿಗೆ ಬಹಳಷ್ಟು ನೋವು, ಸಂಕಟಗಳನ್ನು ಅನುಭವಿಸಲು ಅದುಕಾರಣವಾಗುತ್ತದೆ. ಶಿಬಿರಗಳಲ್ಲಿ ಇಂತಹವರ ಮನಪರಿವರ್ತನೆ ಮತ್ತು ಮನೋವೈದ್ಯಕೀಯಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡುವ ವ್ಯವಸ್ಥೆ ಇರುವುದರಿಂದ ವ್ಯಸನ ಮುಕ್ತರಾಗಲು ಸುಲಭವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಇಂದು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 163ನೇ ವಿಶೇಷ ಮದ್ಯವರ್ಜನ ಶಿಬಿರದ 75ಮಂದಿ ಶಿಬಿರಾರ್ಥಿಗಳನ್ನುಉದ್ದೇಶಿಸಿ ಮಾತನಾಡುತ್ತಿದ್ದರು.

ಯಾವುದೇ ವ್ಯಸನದಿಂದ ಶಾಶ್ವತವಾಗಿದೂರ ನಿಲ್ಲುವುದು ಸುಲಭದ ಮಾತಲ್ಲ. ದೃಢವಾದ ನಿರ್ಧಾರ, ಇಂದ್ರಿಯಗಳ ಹತೋಟಿ, ಸಂಕಲ್ಪ ಶಕ್ತಿಯಿಂದಅದು ಸಾಧ್ಯವಿದೆ. ಸಂಕಲ್ಪ ಶಕ್ತಿ ಇದ್ದವನಿಗೆ ಮಾತ್ರಗುರಿ ಮುಟ್ಟಲು ಸಾಧ್ಯವಿದೆ. ಯಶಸ್ಸು ಸಾಧಿಸಬೇಕಾದರೆ ಪ್ರಜ್ಞೆ ಬಹಳ ಮುಖ್ಯ. ಮುಂದಕ್ಕೆ ಪ್ರತಿಯೊಂದು ವ್ಯವಹಾರದಲ್ಲಿಯೂ ಇಂತಹ ಬುದ್ಧಿವಂತಿಕೆಯನ್ನು ಬಳಸಿ ಬದುಕು ನಿಶ್ಚಿಂತೆಯಿಂದ ನಡೆಸಲು ಸನ್ನದ್ಧರಾಗಬೇಕು ಎಂದು ಪೂಜ್ಯರು ವ್ಯಸನ ಮುಕ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ (ರಿ.) ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ| ಎಲ್. ಹೆಚ್. ಮಂಜುನಾಥ್‍ರವರು ಶಿಬಿರಾರ್ಥಿಗಳಿಗೆ ಪಾನಮುಕ್ತ ಜೀವನದಲ್ಲಿ ಅನುಸರಿಸಬೇಕಾದ ವಿಚಾರಗಳ ಕುರಿತಂತೆ ಮಾರ್ಗದರ್ಶನ ನೀಡಿ ಪ್ರೇರಣೆ ನೀಡಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇದರ ಮನೋರೋಗ ವಿಭಾಗದವರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಯ ವೈದ್ಯಾಧಿಕಾರಿಗಳು ಶಿಬಿರಾರ್ಥಿಗಳ ಮನೋ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಲ್ಲಿ ಸಹಕರಿಸಿದರು. ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ಶಿಬಿರದಕುಟುಂಬ ದಿನವನ್ನು ನೆರವೇರಿಸುತ್ತಾ ಪ್ರತೀ ದಿನದ ಮಾಹಿತಿಯನ್ನು ನೀಡಿದರು. ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ದೇವಿಪ್ರಸಾದ್, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮೀಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:08.11.2021ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.