ಗೋಕರ್ಣ: ಗುರುಗಳು ನಮ್ಮನ್ನು ಉದ್ಧರಿಸಲು ಲೋಕದಲ್ಲಿ ಪ್ರಕಟಗೊಳ್ಳುತ್ತಾರೆ. ಗುರು ದೇವರು ನೀಡುವ ಆಶೀರ್ವಾದ. ಪಾಪದ ಕುಂಡದಲ್ಲಿರುವ ನಮ್ಮನ್ನು ಅನುಗ್ರಹಿಸಲು ಗುರು ಅವತಾರವೆತ್ತಿ ಬರುತ್ತಾರೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 35ನೇ ದಿನವಾದ ಶನಿವಾರ ಆತ್ಮವಿದ್ಯಾ ಆಖ್ಯಾಯಿಕಾ ಪ್ರವಚನದ ಎಂಪಿ3 ಅವತರಣಿಕೆ ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಗುರು ಇಲ್ಲದಿದ್ದರೆ ನಮ್ಮ ಬದುಕು ಅರ್ಥಹೀನ ಎಂದು ಬಣ್ಣಿಸಿದರು.

ರಾಮಾಯಣದಲ್ಲಿ ದಶರಥನ ಧ್ವನಿ ಬಗ್ಗೆ ದುಂದುಬಿಯ ನಾದಕ್ಕೆ ಸದೃಶವಾದ ನಾದ; ಗಂಭೀರ, ಮಾತುಗಳು ಮತ್ತೆ ಮತ್ತೆ ಅನುರಣಿಸುವಂಥದ್ದು; ಗುಡುಗಿನ ಧ್ವನಿ, ರಾಜಲಕ್ಷಣದ ಧ್ವನಿ, ಕೇಳಿದ ತಕ್ಷಣವೇ ಆಪ್ಯಾಯಮಾನವಾಗುವ, ಉಪಮೆ ಇಲ್ಲದ ಧ್ವನಿ ಎಂಬ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿದೆ. ದೊಡ್ಡ ಗುರುಗಳ ಧ್ವನಿಯೂ ಅಂಥದ್ದೇ ಆಪ್ಯಾಯಮಾನ ಧ್ವನಿ ಎಂದು ಬಣ್ಣಿಸಿದರು.

ಅಶೋಕೆಗೆ ಬರಲು ದೊಡ್ಡಗುರುಗಳು ಆಶಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇಂದು ಅವರ ಪ್ರವಚನದ ಧ್ವನಿಯನ್ನು ಎಲ್ಲರೂ ಕೇಳುವುದು ಸಾಧ್ಯವಾಯಿತು. ಅವರ ಶುಭಾಗಮನದ ಪ್ರತೀಕ ಇದಾಗಿದೆ. ದೊಡ್ಡಗುರುಗಳ ಭಾವಪ್ರಕಾಶ, ಅಂತರಂಗ ಆ ಕೃತಿಯ ರೂಪದಲ್ಲಿ ಪ್ರಕಟಗೊಂಡಿದೆ. ಇಂಥ ಅಪೂರ್ವ ಕೃತಿ ಅನಾವರಣಗೊಂಡಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.

ದೊಡ್ಡಗುರುಗಳ ವಿದ್ಯೆ, ಶಾಸ್ತ್ರಜ್ಞಾನ, ವ್ಯವಹಾರ ಜ್ಞಾನ ಅತ್ಯಪೂರ್ವ. ನಮ್ಮ ಆತ್ಮ, ಹೃದಯದಲ್ಲಿ ಗುರುವಾಣಿ ತುಂಬಿರಲಿ ಎಂದು ಹಾರೈಸಿದರು.

ಇಂದು ಮೂಲದತ್ತ ಶಿಷ್ಯಗಂಗೆ ಮಂಗಳೂರಿನಿಂದ ಹರಿದು ಬಂದಿದೆ. ಬೃಹತ್ ಸಂಖ್ಯೆಯಲ್ಲಿ ಶಿಷ್ಯಭಕ್ತರು ಆಗಮಿಸಿದ್ದಾರೆ. ಈ ಭಕ್ತಿಗೆ ಉಭಯ ಗುರುಗಳ ಆಶೀರ್ವಾದ ಲಭಿಸಿದೆ. ಗುರುವಿನೆಡೆಗೆ ಸದಾ ಹರಿಯುವ ಈ ಶಿಷ್ಯವರ್ಗ ಸಂತೋಷ ತರುವಂಥದ್ದು. ಈ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಎಲ್ಲ ಶಿಷ್ಯರಿಗೆ ಪುಣ್ಯಸಂಚಯನವಾಗಲಿ ಎಂದು ಆಶಿಸಿದರು.

ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, "ಛಂದಸ್ಸು ವೇದಬ್ರಹ್ಮನ ಪಾದಗಳಾದರೆ, ಕಣ್ಣು ಜ್ಯೌತಿಷವಾಯಿತು. ವೇದಪುರುಷನ ಸಾನ್ನಿಧ್ಯ ಎಲ್ಲರ ಆತ್ಮದಲ್ಲಿದೆ. ನಮಗೆ ಇರುವ ಎಲ್ಲ ಜ್ಞಾನಗಳೂ ವೇದಪುರುಷನ ಕೃಪೆ. ಜ್ಯೌತಿಷವೆಂಬ ಕಣ್ಣು ನಮ್ಮ ಬದುಕನ್ನು ಕಾಣಲೂ ಸಹಕಾರಿ. ಎಲ್ಲ ಶಾಸ್ತ್ರಗಳೂ ಜೀವಕ್ಕೆ, ಜೀವನಕ್ಕೆ, ಜೀವನವನ್ನು ಮೀರಲು ಉಪಯೋಗವಾಗಬೇಕು" ಎಂದು ಹೇಳಿದರು.

ಆಯುರ್ವೇದಕ್ಕೆ ಜ್ಯೋತಿಷ್ಯ ಕಡ್ಡಾಯವಾಗಬೇಕು. ಆಯುರ್ವೇದದಲ್ಲಿ ಜ್ಯೋತಿಷ್ಯಕ್ಕೆ ದೊಡ್ಡ ಸ್ಥಾನವಿದೆ. ಜಾತಕದಿಂದ ಆರೋಗ್ಯ, ರೋಗ, ಯಾವ ಅಂಗದಲ್ಲಿ ರೋಗವಿದೆ, ಯಾವ ಧಾತು ರೋಗಕ್ಕೆ ಕಾರಣವಾಗಿದೆ ಎನ್ನುವುದನ್ನು ತಿಳಿಯಬಹುದು. ಕಾಯಿಲೆಕಾರಕ ಗ್ರಹದ ದಶಾಭುಕ್ತಿಯಲ್ಲಿ ಆ ರೋಗ ಬರಬಹುದು. ಜ್ಯೋತಿಷ್ಯದ ಮೂಲಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ ಎಂದರು.

ರೋಗ ಜ್ಯೋತಿಷ ಬಗ್ಗೆ ಉಲ್ಲೇಖಿಸಿ, ಜ್ಯೋತಿಷ್ಯದ ಪ್ರಕಾರ ರೋಗಗಳು ಎರಡು ವಿಧ. ಒಂದು ನಿಜ ಇನ್ನೊಂದು ಆಗಂತುಕ. ನಮ್ಮೊಳಗೇ ವ್ಯಕ್ತವಾಗುವದು ನಿಜ; ಇದರಲ್ಲಿ ಎರಡು ಭಾಗ. ನಿಜದಲ್ಲಿ ಮತ್ತೆರಡು ವಿಭಾಗ; ಒಂದು ಮನೋಜನ್ಯ ಇನ್ನೊಂದು ಶರೀರ ಜನ್ಯ. ಒಂದು ಕಾರಣ ತಿಳಿಯುವಂತದ್ದು, ಇನ್ನೊಂದು ಕಾರಣ ತಿಳಿಯದ ರೋಗಗಳು ಎಂದು ವಿಶ್ಲೇಷಿಸಿದರು.

ಮಂಗಳೂರು ಮಂಡಲದ ಬಾಯಾರು, ಕನ್ಯಾನ, ವಿಟ್ಲ, ಕೇಪು, ಕೋಳ್ಯೂರು ಮತ್ತು ಕಲ್ಲಡ್ಕ ವಲಯಗಳಿಂದ ಸರ್ವಸೇವೆ ನೆರವೇರಿತು. ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿಯವರು ರಚಿಸಿದ ಆತ್ಮವಿದ್ಯಾ ಆಖ್ಯಾಯಿಕದ ಬಗ್ಗೆ ಪರಮಪೂಜ್ಯರೇ ಅನುಗ್ರಹಿಸಿದ ಪ್ರವಚನದ ಧ್ವನಿಮುದ್ರಿಕೆಯ ಎಂಪಿ3 ಅವತರಣಿಕೆಯನ್ನು ದೊಡ್ಡಗುರುಗಳ ಕಾಲದಲ್ಲಿ ಶ್ರೀಪರಿವಾರದಲ್ಲಿ ಸೇವೆ ಸಲ್ಲಿಸಿದ ವೇದಮೂರ್ತಿ ತಿಮ್ಮಣ್ಣ ಭಟ್ ನೆರವೇರಿಸಿದರು.

ಬೈಂದೂರು ಮಾಜಿ ಶಾಸಕ ಸುಕುಮಾರ ಶೆಟ್ಟಿ ಆಗಮಿಸಿ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.