ಮಂಗಳೂರು : 75ನೇ ಸ್ವಾತಂತ್ರ್ಯೋತ್ಸವದ ಪ್ರಯಕ್ತ ಆಜಾದಿ ಕ ಅಮೃತ ಮಹೋತ್ಸವನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹರ್ ಘರ್ ತಿರಂಗಾ ದೇಶ ಪ್ರೇಮದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆ ಸಂಬಂಧ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿಯವರು ಪಾಲಿಕೆ ಆಯುಕ್ತರ ಸಹಿತ ಈ ಬಗೆಗೆ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. ರಾಜ್ಯ ಸರಕಾರದ ಮಾರ್ಗಸೂಚಿಯ ಪ್ರಕಾರ ಸರ್ವರನ್ನು ಒಳಗೊಂಡು ಚರ್ಚಿಸಿ ಕಾರ್ಯಕ್ರಮ ನಿರ್ಣಯಿಸಲಾಗಿದೆ. ಮನಪಾ ವ್ಯಾಪ್ತಿಯಲ್ಲಿ 60,000 ರಾಷ್ಟ್ರ ಧ್ವಜಗಳನ್ನು ಮುಟ್ಟಿಸಿ ಹಾರಿಸುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಕೌನ್ಸಿಲರಗಳು ಮತ್ತು ಪಾಲಿಕೆ ನೌಕರರ ಸಹಕಾರವನ್ನು ಪಡೆಯಲಾಗುತ್ತಿದೆ ಎಂದು ಪ್ರೇಮಾನಂದ ಶೆಟ್ಟಿಯವರು ಹೇಳಿದರು.
ನಗರದಲ್ಲಿ ಮುಖ್ಯವಾಗಿ ತುಂಬೆ ಡ್ಯಾಮ್, ವೃತ್ತಗಳು, ಕಟ್ಟಡಗಳನ್ನು ವಿದ್ಯುತ್ ವೈಭವದಲ್ಲಿ ಬೆಳಗಿಸಲಾಗುವುದು. ಅಲ್ಲದೆ ರಂಗೋಲಿ ಸ್ಪರ್ಧೆ, ಸ್ವಾತಂತ್ರ್ಯ ನಡಿಗೆ, ಸಾಂಸ್ಕೃತಿಕ ಎಂದು ಇತ್ಯಾದಿ ಕಾರ್ಯಕ್ರಮಗಳನ್ನು ಮನಪಾ ಹಮ್ಮಿಕೊಂಡಿದೆ ಎಂದು ಮೇಯರ್ ಹೇಳಿದರು.
ಪ್ರಧಾನಿ ಮೋದಿಯವರು 75 ವಾರಗಳ ಹಿಂದೆ ಈ ಸಂಬಂಧ ಸಂಖ್ಯಾ ರೀತ್ಯಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಟೋಟ ಸ್ಪರ್ಧೆಗಳೂ ಅದರಲ್ಲಿ ಸೇರಿದೆ. ಸಾರ್ವಜನಿಕರು ಸರ್ವ ರೀತಿಯಿಂದಲೂ ಸಹಕರಿಸಬೇಕು ಎಂದು ಮೇಯರ್ ಕೇಳಿಕೊಂಡರು. ಒಂದು ಬಾವುಟದ ಬೆಲೆ ರೂ. 22 ಇದ್ದು ಉಚಿತವಾಗಿ ಸಹ ನೀಡಬಹುದು ಎಂದು ಅವರು ಹೇಳಿದರು.
ಮನಪಾ ವ್ಯಾಪ್ತಿಯಲ್ಲಿ 32 ಮನೆಗಳು ಹಾನಿಗೊಳಗಾಗಿದ್ದು ಅದಕ್ಕೆ ಕಿಂಚಿತ್ ಪರಿಹಾರ ಮಾತ್ರ ನಾವು ನೀಡಬಹುದು. ಉಳಿದಂತೆ ತಹಶಿಲ್ದಾರ್, ಜಿಲ್ಲಾಧಿಕಾರಿ, ಸರಕಾರದ ಮೂಲಕವೇ ಪರಿಹಾರ ವಿತರಣೆ ಆಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.