ಮಂಗಳೂರು, ಮಾರ್ಚ್ 27: ಮಂಗಳೂರಿನ ಓಶನ್ ಪರ್ಲ್ ಹೋಟೆಲಿನಲ್ಲಿ ಮೂರನೆಯ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಹಬ್ಬ ಆರಂಭವಾಯಿತು.

ಕಳೆದ‌ ವರುಷವೇ ನಡೆಯಬೇಕಾಗಿದ್ದ 3ನೇ ಆವೃತ್ತಿಯ ಮಂಗಳೂರು ಸಾಹಿತ್ಯ ಹಬ್ಬವು ಕೋವಿಡ್ 19 ಕಾರಣ ಇಂದು ನಡೆಯಿತು. ಮೊದಲಿಗೆ ಶಾರದೆಯ ಪ್ರಾರ್ಥನೆ ನಡೆದು ಸುನಿಲ್ ಕುಲಕರ್ಣಿಯವರು ಉದ್ಘಾಟನೆಗೆ ಎಲ್ಲರಿಗೂ ಸ್ವಾಗತ ಕೋರಿದರು. ಎಲ್ಲರನ್ನೂ ತಲುಪಲು ಇಂದು ಬೆಂಗಳೂರಿನ ಎರಡು ‌ಕಡೆ‌ ಸಹಿತ ರಾಜ್ಯದ ಆರು ಕಡೆ ಲಿಟ್ ಫೆಸ್ಟ್ ನಡೆಯುತ್ತಿರುವ ಬಗೆಗೆ ವಿವರಿಸಿದರು.

ಪ್ರಧಾನಿಯವರ ಹಿಂದಿನ ನೀತಿ ಕಾರ್ಯದರ್ಶಿ ಶಕ್ತಿ ಸಿನ್ಹಾ, ಗೋವಾ ವಿವಿಯ ಡಾ. ನಂದಕಿಶೋರ್ ಮೊದಲಾದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಬಳಿಕ ಸೋಂಕು ರೋಗದ ನೆರಳಿನಾಚೆ ಭಾರತ ಎಂಬ ಮೊದಲ ‌ವಿಚಾರ ಸಂಕಿರಣ ‌ನಡೆಯಿತು.

ಇದರಲ್ಲಿ ಮೊದಲಿಗೆ ಮಾಡರೇಟರ್ ವಿಕ್ರಂ ಸೂದ್ ಮಾತನಾಡಿ, ದೇಶಕ್ಕೆ ಭಾರತಕ್ಕೆ ಇಲ್ಲಿನ ಬಿಸ್ಮಾ ಸರ್ದಾರ್ ಪಟೇಲ್, ವಾಜಪೇಯಿ ಮೊದಲಾದವರು ಬದಲಾವಣೆ ನೀಡಿದರು. ಆದರೆ ‌ಕೊರೋನಾ ದೇಶವನ್ನು ನಾನಾ ವಿಷಯಗಳಲ್ಲಿ ಹಿಂದಕ್ಕೆ ಒಯ್ದಿದೆ ಎಂದರು.

ಸಿನ್ಹಾ ಅವರು ಮಾತನಾಡಿ ಭಾರತವು ವಿಶ್ವ ಗುರು ಆಗುವತ್ತ ಹೆಜ್ಜೆ ಇಟ್ಟಿದ್ದರೂ ಅದು‌ ಬಲವಾದ ಹೆಜ್ಜೆ ಅಲ್ಲ.‌ ಇನ್ನಷ್ಟು ಬಲವಾಗಿ ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ಭಾರತವು ವಿಶ್ವ ಗುರು ಹಾದಿಯಲ್ಲಿ ಇನ್ನೂ ಹಲವಾರು ಕಾಲ ಅಭಿವೃದ್ಧಿಶೀಲ ದೇಶವಾಗಿಯೇ ಉಳಿಯಬೇಕಾಗುತ್ತದೆ ಎಂದರು.

ಇದೇ ವೇಳೆ ಆನ್ ಲೈನ್ ಚರ್ಚೆಯಲ್ಲಿ ಪಾಲ್ಗೊಂಡ ಹಿರಿಯರು ದೇಶದ ವಿಶೇಷತೆ ಬರೇ ಮಿಲಿಟರಿ ಬಲ ಮತ್ತು ಹಣದ ಶಕ್ತಿಯಲ್ಲಿ ಇಲ್ಲ. ಅದು ಜನ ಬದುಕಿನ ಸಮತೆ, ಸಾಹಿತ್ಯದ‌ ಎಚ್ಚರಗಳಲ್ಲಿ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆನ್ ಲೈನ್ ಚರ್ಚೆಯಲ್ಲಿ ಪಾಲ್ಗೊಂಡ‌ ದತ್ತೇಶ್ ಪ್ರಭು ವಿಶೇಷ ಕ್ರಮಗಳ ಮೂಲಕ ಮಾತ್ರ ಕೊರೋನಾ ಬಾಧೆಯನ್ನು ದಾಟಬಹುದು ಎಂದರು. ಮಾಧವ ನಲಪಾತ್ ಮಾತನಾಡಿ ಈ ಬಾಧೆಗಳು 6,000 ವರುಷ ಹಳೆಯವು. ಭಾರತೀಯರ ಜೀನ್ ನಲ್ಲಿ ವೇದಿಕ್, ಮೊಗಲ್, ಪಾಶ್ಚಾತ್ಯ ಅಂಶಗಳು ಇರುವುದರಿಂದ ಹಿಂದೂ ವಾದಕ್ಕೆ ಅರ್ಥವಿಲ್ಲ. ವಸುದೇವ ಕುಟುಂಬಕಂ ಮಾತಿನಿಂದ ಅಲ್ಲ ಕೃತಿಯಿಂದ ಆಗಬೇಕು ಎಂದರು.