ಮಂಗಳೂರು: ನೆಲದ ಭಾಷೆ, ಮನದ ಮಾತು, ನವಭಾರತಕೆ ದೇಸಿ ಸೊಗಡು ಎಂಬ ಮಂಗಳೂರು ಲಿಟ್ ಫೆಸ್ಟ್ 2021ರ ಎರಡನೇ ಗೋಷ್ಠಿಯು ಬೇಂದ್ರೆ 125ರ ಜೊತೆ ಸಮೀಕರಣ ಪಡೆಯಿತು.
ಹಾವೇರಿ ಜನಪದ ವಿವಿಯ ಡಾ. ಅನ್ನದಾನಪ್ಪ ಜೋಗಿ ಅವರು ನಾಗರಿಕರಲ್ಲಿ ಹಂಚಿ ಉಣ್ಣುವ ಕೊರತೆ ಇದೆ ಎಂದರು. ಹಿಂದೆ ಬೇಟೆ ಸಾಮೂಹಿಕವಾಗಿ ನಡೆಯುತ್ತಿತ್ತು. ಅಲ್ಲಿ ಎಲ್ಲರಿಗೂ, ಬೇಟೆಗೆ ಬಂದ ಮಾಂಸದ ಸಮಪಾಲು ಇತ್ತು. ಈಗ ಅದು ಕಾಣೆಯಾಗಿದೆ. ಕೊರೋನಾ ಕಾಲದಲ್ಲಿ ಕೆಲವರಿಗೆ ಕಿಟ್, ಹಲವರಿಗೆ ಇಲ್ಲ ಎಂದಾದದ್ದು ದೊಡ್ಡ ದುರಂತ ಎಂದರು.
ಸತ್ಯಬೋಧ ಜೋಗಿಯವರು ರಿಯಾಲಿಟಿ ಶೋ ಶೂಟ್ ಆಗುತ್ತಿದೆಯೇ ಹೊರತು ಹಳ್ಳಿಯ ಬೀಸುವ ಪದ ಅಲ್ಲ. ಆಡಿನ ಹಿಕ್ಕಿಯ ತೀಡಿ ಶಿವನ ಮಾಡಿ ಎನ್ನುವ ಜನಪದವು ನೆಲದ ನಿಸರ್ಗ ಸಾಕ್ಷಿಯದು. ಕೋಟಿ ಚೆನ್ನಯ ಇತ್ಯಾದಿ ದೈವಗಳ, ಸಾವಿಗೆ ಸವಾಲು ಹಾಕಿ ಮೀನು ಹಿಡಿಯಲು ಹೋಗುವ ಮೀನುಗಾರರ ಬದುಕು ಇವೆಲ್ಲ ದಾಖಲಾಗಬೇಕು. ರಿಯಾಲಿಟಿ ಶೋ ಜನ ಮನವಲ್ಲ ಎಂದು ವಿವರಿಸಿದರು.
ಮಂಗಳಾ ಸಿದ್ದಿಯವರು ನಮ್ಮ ಕುಣಿತ, ಹಾಡುಗಳು ಇಂದು ಇತರ ಸಂಸ್ಕೃತಿ ಜೊತೆ ಹೋಲಿಕೆ ಆಗುವುದು ಸರಿಯಲ್ಲ. ನಮ್ಮ ಚರ್ಮ ವಾದ್ಯ ದಾಟಿ ಇಂದು ನಾನಾ ಆಧುನಿಕ ಸಂಗೀತ ಸೇರಿದೆ. ನಮ್ಮ ಐದು ದಿನಗಳ ಮದುವೆ ಉಳಿಸಲಾಗದು ಆದರೆ ಅದರ ಮುಖ್ಯ ಆಹಾರಗಳನ್ನು ಒಂದೆರಡು ದಿನಗಳಲ್ಲಿ ತೋರಿಸುವಂತಾಗಬೇಕು ಎಂದರು.
ಚರ್ಚೆಯಲ್ಲಿ ಕೊರವಂಜಿ ಕುಣಿತದಿಂದ ಭರತ ನಾಟ್ಯ ಹುಟ್ಟಿದೆ. ಬುಡಕಟ್ಟು ಸಂಸ್ಕೃತಿ ಎಲ್ಲದಕ್ಕೂ ಮೂಲ. ಪದವಿ ಓದಿದವರು ಮೂಲ ನೆಲೆ ರಕ್ಷಕರಲ್ಲ. ಅವರು ಮಾನವ ಮೌಲ್ಯದಿಂದ ದೂರವಾಗುವುದಷ್ಟೆ ಅಲ್ಲ ನೆಲದ ಬನಿಯಿಂದಲೂ ದೂರವುಳಿಯುತ್ತಾರೆ ಎಂಬ ಅಭಿಪ್ರಾಯಗಳು ಮೂಡಿಬಂದವು.
ಈ ಗೋಷ್ಠಿಯ ಮಾಡರೇಟರ್ ರೋಹಿತಾಕ್ಷ ಶಿರ್ಲಾಲು ಅವರು ತುಳು ಓಬೇಲೆ ಹೇಳುವ ಕತ್ತಲೆಯಿಂದ ಬೆಳಕಿಗೆ, ಹಂಚಿಕೊಳ್ಳುವ ಪರಂಪರೆಯ ಹಿರಿಮೆಯನ್ನು ಒತ್ತಿ ಹೇಳಿದರು.