ಕಾರ್ಕಳ: ವಿದ್ಯಾರ್ಥಿಗಳೇ  ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ದರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ   ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಇಂದಿಲ್ಲಿ ಎಸ್‍ವಿಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವರ್ಗೀಯ ಹಿರಿಯ ಪತ್ರಕರತ ಡಾ| ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ  ಸಮಾರಂಭವನ್ನುದ್ದೇಶಿಸಿ ಜಸ್ಟೀಸ್ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು ಅವರೆ ಸಮಾಜವನ್ನು ಬದಲಾಯಿಸುವವರು. ಮಾನವೀಯತೆಯನ್ನು ರೂಢಿಸಿಕೊಂಡು, ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಿ ಎಂದರು. 

ಪತ್ರಕರ್ತ ಬಿ.ಎಂ ಬಶೀರ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು. ಶೇಖರ ಅಜೆಕಾರು ಸಾಹಿತ್ಯ ಸಂಘಟಕರಾಗಿದ್ದು ಜನಮೆಚ್ಚುಗೆ ಪಾತ್ರರಾದವರು. ಊರಿಗೆ ಹಾಗೂ ಮುಂಬಯಿ ಜನರಿಗೆ ಸ್ನೇಹ ಸೇತುವಾಗಿದ್ದು ಅವರು  ಸೂಕ್ಷ್ಮ ಸಂವೇದನೆ ಹೊಂದಿದ್ದರು ಎಂದರು. ಪ್ರಶಸ್ತಿಗೆ ಉತ್ತರಿಸಿ ಬಶೀರ್ ತಿಳಿಸಿ ಪ್ರಶಸ್ತಿಯ ಒಟ್ಟು ನಗದು ಮೊತ್ತವನ್ನು ಸೌಮ್ಯಶ್ರೀ ಶೇಖರ ಅಜೆಕಾರು ಅವರಿಗೆ ಹಸ್ತಾಂತರಿಸಿದರು .

ಎಸ್‍ವಿಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶೇಖರ ಅಜೆಕಾರು ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ಜನರ ಮನಗೆದ್ದವರು. ಸಾಹಿತ್ಯ ಸಂಘಟಕ ಪತ್ರಕರ್ತ ಆಗಿದ್ದ ಶೇಖರ ಅಜೆಕಾರು ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿರುವ ಕಾರ್ಕಳ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಪತ್ರಕರ್ತರ ಸಂಘವನ್ನು ಕೊಂಡಾಡಿದರು. 

ಶಿಲ್ಪಿ ರಾಮಚಂದ್ರ ಆಚಾರ್ಯ, ಸಾಹಿತಿ ಜ್ಯೋತಿ ಗುರುಪ್ರಸಾದ್ ಮಾತನಾಡಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಕೆ.ಎಂ.ಖಲೀಲ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರದ ಮುನಿಯಾಲು ಸೌಮ್ಯ ಶೇಖರ ಅಜೆಕಾರು, ಮಾ| ಸುನಿಧಿ ಎಸ್. ಅಜೆಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿದರು. ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ಧನ್ಯವಾದ ವಿತ್ತರು.