ಮಾರ್ಚ್-ಏಪ್ರಿಲ್ ಬಂದಾಕ್ಷಣ ಎಲ್ಲರಿಗೂ ನೀರಿನ ಅಗತ್ಯದ ಕುರಿತು, ನೀರಿನ ಸಂಗ್ರಹದ ಅವಶ್ಯಕತೆಯ ಕುರಿತು ಬಹಳ ತರಹದ ಮಾತು-ಕತೆ, ಅಭಿಪ್ರಾಯ, ಮಾತು ಎಲ್ಲರಿಗೂ ನೆನಪಿಗೆ ಬರುತ್ತದೆ. ರಾಜಕಾರಣಿಗ¼ಗಂತೂ ಇದು ಸದಾ ಬಾಯಿ ಚಪಲದ ವಸ್ತುವಾಗಿ ಪದೇ ಪದೇ ಹೊರಹೊಮ್ಮುತ್ತಿರುತ್ತದೆ. ಆದರೆ ಜೂನ್ 10 ರ ಲಾಗಾಯ್ತು ಸಪ್ಟಂಬರ್ ತನಕವೂ ಎಡೆಬಿಡದೆ ಸುರಿಯುವ ಮಳೆಯ ಸಂದರ್ಭದಲ್ಲಿ ಮತ್ತೆ ಏಪ್ರಿಲ್-ಮೇ ಸಮಯದಲ್ಲಿ ಕಡು ಬಿಸಿಲಿನ, ನೀರೂ ದೊರೆಯದ ತಿಂಗಳುಗಳು ಬರುತ್ತವೆ ಎಂಬ ನೆನಪೂ ಮರೆತೇ ಹೋಗಿರುತ್ತದೆ. ಕೆಲವಾರು ಬಾರಿ ಅಕ್ಟೋಬರ್ ನಿಂದ ದಶಂಬರ್ ತನಕವೂ ಆಗಾಗ ಮಳೆ ಬಂದರೂ ಮತ್ತೆ ಏಪ್ರಿಲ್-ಮೇ ತಿಂಗಳಲ್ಲಿ ನೀರಿಗಾಗಿ ಹಾಹಾಕಾರ ಎನ್ನುವುದು ಯಥಾವತ್ ಬೊಂಬಾಟವಾಗಿರುತ್ತದೆ.

ಕೆಲವಾರು ರಾಜ್ಯಗಳು ಕೇವಲ ನೀರಿಗಾಗಿ ಹೊಯ್ದಾಟ ಆಡುವ ಸಂಪ್ರದಾಯ ಪ್ರತೀ ವರ್ಷವೂ ನಡೆಯುತ್ತಿದ್ದರೂ ಕೂಡಾ ನೀರು ಲಭ್ಯವಿರುವಾಗ ಅತಿ ಹೆಚ್ಚು ಪ್ರಮಾಣದಲ್ಲಿ ಶೇಖರಿಸಿಡುವ ಸಂಗ್ರಹಾಗಾರಗಳನ್ನು ಸುಸ್ಥಿತಿಯಲ್ಲಿಡದೇ ಜಗಳಾಟದಲ್ಲೇ ತಲ್ಲೀನರಾಗಿರುತ್ತಾರೆ. ಪ್ರತೀ ರಾಜ್ಯಗಳವರೂ ತಮ್ಮ ರಾಜ್ಯದಲ್ಲಿರುವ ಎಲ್ಲಾ ಕಲ್ಯಾಣಿ, ಕೆರೆ, ಕಾಲುವೆ, ತೋಡು, ನದಿಗಳ ಹೂಳೆತ್ತಿದಲ್ಲಿ ಹಾಗೂ ಆ ಎಲ್ಲಾ ನೀರು ಸಂಗ್ರಹಾಗಾರಗಳಲ್ಲಿ ಹಾಕಿರುವ ತಡೆಗೋಡೆಗಳ ಸಮೀಪದಲ್ಲಿ ಸಂಗ್ರಹವಾಗಿರುವ ಮಣ್ಣು, ಮರಳು ಇತ್ಯಾದಿಯನ್ನು ಮಳೆ ಪ್ರಾರಂಭವಾಗುವುದಕ್ಕೆ ಬಹಳ ಮುಂಚಿತವಾಗಿ ನಿವಾರಿಸಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳ ಬೇಕು. ಅದೇ ಪ್ರಕಾರ ಎಲ್ಲಾ ಅಣೆಕಟ್ಟುಗಳಲ್ಲಿ ವರ್ಷಂಪ್ರತಿ ಸಂಗ್ರಹವಾಗುವ ‘ಹೂಳು’ ತೆಗೆದು ನಿವಾರಿಸಿದಲ್ಲಿ ಖಂಡಿತವಾಗಿಯೂ ಹಲವಾರು ಅಡಿ ಹೆಚ್ಚು ನೀರು ಸಂಗ್ರಹವಾಗಿ ನಮ್ಮ ಅಣೆಕಟ್ಟೆಗಳು, ಜಲಾಶಯಗಳು ಹೆಚ್ಚು ನೀರು ಸಂಗ್ರಹಾಗಾರಗಳಾಗಿ ಮಾರ್ಪಾಡಾಗಲಿವೆ.

ಒಳಜಗಳಾಟÀದಲ್ಲೇ ವರ್ಷವಿಡೀ ನಿರತರಾಗುವ ರಾಜಕಾರಣಿಗಳಿಗೆ, ಅವರ ತಳ್ಳಾಟದಲ್ಲೇ ಸಂಭ್ರಮಿಸುವ ಅವರ ಹಿಂಬಾಲಕರಿಗೆ, ಈ ರೀತಿಯ ಎಚ್ಚರಿಕೆ ಹೇಗೆ ಮೂಡಲು ಸಾಧ್ಯ? ಎತ್ತರದ ಗುಡ್ಡಗಳನ್ನು ಸಮತಟ್ಟುಗೊಳಿಸಿ ಹಣ ಮಾಡಲು ರೆಸಾರ್ಟ ನಿರ್ಮಿಸುವ ಮಂದಿಗೆ ಮುಂದೊಂದು ದಿನ ಅಲ್ಲಿ ಬಿದ್ದ ನೀರು ಇಂಗಿ ಮೇಲಿನ ಇನ್ನೂ ಎತ್ತರದ ಗುಡ್ಡ ಜರಿದು ಬಿದ್ದು ಸರ್ವನಾಶವಾಗುವದೆಂಬ ಪ್ರಾಥಮಿಕ ಪರಿಜ್ಞಾನವೂ ಮೂಡದೇ ಮಡಿಕೇರಿ, ಚಿಕ್ಕಮಗಳೂರು, ಪ್ರಾಂತ್ಯಗಳಲ್ಲಿ ಹಲವಾರು ತೊಂದರೆಗಳಾಗಿರುವುದು ನಮಗೆಲ್ಲಾ ತಿಳಿದ ವಿಷಯ. ಹೀಗಿರುವಾಗ ಅಂತಹzಕ್ಕೆ ಆಸ್ಪದ ಕೊಡುವ ರಾಜಕಾರಣಿಗಳು, ಅಧಿಕಾರಿಗಳು  ಸ್ವಲ್ಪ ಯೋಚಿಸ ಬೇಡವೇ? ಎತ್ತರದ ಬೆಟ್ಟ-ಗುಡ್ಡಗಳನ್ನು ಕಡಿದು ಸಮತಟ್ಟುಗೊಳಿಸಿ ರೆಸಾರ್ಟ ಇತ್ಯಾದಿ ಮಾಡಿಸುವ ಮೊದಲು ಪ್ರತಿಯೊಬ್ಬರೂ ಯೋಚಿಸಬೇಕಾದ ಅನಿವಾರ್ಯತೆ ಇದೆ.

ಕೇಂದ್ರ ಸರಕಾರ ಪ್ರತೀ ಮನೆಗೂ ‘ನಲ್ಲಿ’ ಸಂಪರ್ಕದ ಮೂಲಕ ಶುದ್ಧ ನೀರು ಒದಗಿಸುವ ಪ್ರಮಾಣ ಮಾಡಿದೆ. ಈ  ಕೆಲಸ ನಿಜಕ್ಕೂ ಅತ್ಯುತ್ತಮವಾದುದು. ಆದರೆ ಅಷ್ಟು ಪ್ರಮಾಣದಲ್ಲಿ ನೀರು ನೀಡಬೇಕಿದ್ದರೆ ನೀರನ್ನು ಸಂಗ್ರಹಿಸುವ ಕೆಲಸ ಆಗಬೇಕಿರುವುದು ಅನಿವಾರ್ಯ. ಅಂತಹ ಕ್ರಮಕ್ಕಾಗಿ ನಮ್ಮ ಸುತ್ತಮುತ್ತ ಇರುವ ಎಲ್ಲಾ ನೀರು ಸಂಗ್ರಹಾಗಾರಗಳಾದ ಕಲ್ಯಾಣಿ, ಕೆರೆ, ಮದಗ, ಕಾಲುವೆ, ನದಿ, ತೋಡು, ಇತ್ಯಾದಿಗಳೆಲ್ಲವೂ ಶುದ್ಧಗೊಂಡು ಹೆಚ್ಚು ನೀರು ಸಂಗ್ರಹಗೊಳ್ಳುವಂತೆ ಮಾಡಬೇಕಾಗಿದೆ. ಈ ಕಾರ್ಯ ಪ್ರತೀಯೊಬ್ಬರಿಂದಲೂ ಆಗಬೇಕಾದ ಅನಿವಾರ್ಯತೆ ಇದೆ.

ಮಳೆಗಾಲ ಮುಗಿಯುತ್ತಿದ್ದಂತೆ ನದಿ,ತೊರೆಗಳಿಗೆ, ತೋಡುಗಳಿಗೆ ಮರಳಿನ ಚೀಲಗಳನ್ನು ಶೇಖರಿಸಿ ಇಟ್ಟು ನೀರನ್ನು ಹಿಡಿದಿಟ್ಟು ತಮ್ಮ ಗದ್ದೆ-ಇತ್ಯಾದಿಗಳಿಗೆ ನೀರನ್ನು ಹಾಯಿಸುವ, ಬಾವಿ, ಕೆರೆಗಳ ನೀರಿನ ಒರತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ನೀರನ್ನು ಶೇಖರಿಸುವುದರಲ್ಲಿ ತೋರಿಸುವ ಸಿದ್ಧತೆಯನ್ನು ಮಳೆಗಾಲ ಪ್ರಾರಂಭಕ್ಕೆ ಮೊದಲು ಸೇಖರಿಸಿಟ್ಟ ಮರಳಿನ ಚೀಲವನ್ನು ನಿವಾರಿಸುವಲ್ಲಿ ತೋರಿಸುವುದಿಲ್ಲ. ಹೀಗಾಗಿ ಮಳೆ ಹೆಚ್ಚಿದೊಡನೆ ಶೇಖರಿಸಿಟ್ಟ ಚೀಲಗಳು ಅರೆಬರೆ ನೀರಿನೊಡನೆ ಸೇರಿ ಅಥವಾ ಅಲ್ಲೇ ಉಳಿದು ನೀರಿನ ಹರಿವಿಗೆ ತೊಂದರೆದಾಯಕವಾಗಿ ಪರಿಣಮಿಸುತ್ತವೆ. ಅಂತಹದಕ್ಕೆಲ್ಲ ಪರಿಹಾರವೆಂದರೆ ನೀರು ಶೇಖರಿಸುವಲ್ಲಿ ತೋರುವ ಉತ್ಸಾಹವನ್ನು ಮಳೆಗಾಲ ಪ್ರಾರಂಭಕ್ಕೂ ಮೊದಲು ಕೂಡಾ ತೋರಿಸಿ ನೀರಿನ ಸಂಗ್ರಹ ಕಡಿಮೆಯಾದಾಕ್ಷಣ ಆ ಎಲ್ಲಾ ಮರಳಿನ ಚವೀಲ ಇತ್ಯಾದಿಗಳನ್ನು ನಿವಾರಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿ ಮುಂದಿನ ಮಳೆಗಾಲಕ್ಕೆ ಸಿದ್ಧಗೊಳಿಸಿಕೊಳ್ಳುವುದು. ಇದರಿಂದಾಗಿ ನೀರಿನ ಹರಿವಿಗೂ ತೊಂದರೆ ನಿವಾರಿಸಿದಂತಾಗುತ್ತದೆ.

ಸಾಮಾನ್ಯವಾಗಿ ಪ್ರತೀ ಗ್ರಾಮದಲ್ಲೂ ಕನಿಷ್ಠ 10 ರಿಂದ 20 ರಷ್ಟಾದರೂ ನೈಸರ್ಗಿಕ ಕಲ್ಯಾಣಿ, ಕೆರೆ, ಮದಗಗಳಿವೆ. ಇಂತಹ ಎಲ್ಲಾ ನೀರು ಸಂಗ್ರಹಾಗಾರಗಳಲ್ಲಿ ಹೂಳು ತುಂಬಿ ಎಲ್ಲವೂ ಸಮತಟ್ಟಾಗಿವೆ. ಅಂತಹ ಎಲ್ಲಾ ನೀರು ಸಂಗ್ರಹಾಗಾರಗಳಲ್ಲಿ ನೀರಿನ ಶೇಖರಣೆಗೆ ತೊಂದರೆದಾಯಕವಾಗಿರುವ ಹೂಳನ್ನು ನಿವಾರಿಸಿ ಈ ಹಿಂದಿನಂತೆಯೇ ಸಾಕಷ್ಟು ನೀರು ಶೇಖರಣೆಗೊಳ್ಳುವಂತೆ ಮಾಡಬೇಕು. ಏಕೆಂದರೆ ಇಲ್ಲವಾದಲ್ಲಿ ಈಗಾಗಲೇ ಪೇಟೆ, ಪಟ್ಟಣ, ಮಹಾ ನಗರಪಾಲಿಕೆಗಳಲ್ಲಿ ಉದಾ: ಬೆಂಗಳೂರು, ಮಂಗಳೂರು, ಇತ್ಯಾದಿ ಪ್ರದೇಶಗಳಲ್ಲಿ ಆದಂತೆ ಇದ್ದ ಕೆರೆ, ಕಲ್ಯಾಣಿ, ಮದಗ ಇತ್ಯಾದಿ ತಗ್ಗು ಪ್ರದೇಶಗಳೆಲ್ಲದರಲ್ಲೂ ಅಲ್ಲಿಯ ಹೂಳು ತೆಗೆಯದೇ ಆ ಸ್ಥಳಕ್ಕೆ ಮತ್ತಷ್ಟು ಮಣ್ಣು ತುಂಬಿ ದೊಡ್ಡ, ದೊಡ್ಡ ಕಟ್ಟಡ, ನಿಲ್ದಾಣ ಇತ್ಯಾದಿ ನಿರ್ಮಿಸಿ ಮಳೆಗಾಲದಲ್ಲಿ ಇತರ ಪ್ರದೇಶದವರಿಗೆ ಕೃತಕ ನೆರೆ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಅಂತಹ ಎಲ್ಲಾ ಪ್ರದೇಶಗಳು ಇಂದಿಗೂ ಕಂದಾಯ ದಾಖಲೆಗಳಲ್ಲಿ ಕೆರೆ, ಕಲ್ಯಾಣಿ, ಮದಗ ಎಂದೇ ನಮೂದಾಗಿರುವುದು ಕಂಡುಬರುತ್ತದೆ. ಆದುದರಿಂದ ಕನಿಷ್ಠ ಪಕ್ಷ ಉಳಿದಿರುವ ಎಲ್ಲಾ ಕಡೆಗಳ ಕಂದಾಯ ದಾಖಲೆಯ ಕೆರೆ, ಕಲ್ಯಾಣಿ, ಮದಗ, ನದಿ, ತೊಡು ಇತ್ಯಾದಿಗಳನ್ನಾದರೂ ನಾವು ರಕ್ಷಿಸಿಕೊಳ್ಳಬೇಕಾಗಿದೆ. ಆ ಎಲ್ಲಾ ಪ್ರದೇಶಗಳನ್ನೂ ಶುಚಿಗೊಳಿಸಿ ಶುದ್ಧ ನೀರು ಸಂಗ್ರಹವಾಗುವಂತೆ ಪ್ರಯತ್ನಿಸಬೇಕಾಗಿದೆ.

ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕೆರೆ, ಕಾಲುವೆಗಳಿಗೆ ನೀರು ತುಂಬಿಸಿ ನೀರನ್ನು ಹಿಡಿದಿಡುವ ಪ್ರಯತ್ನ ನಿಜಕ್ಕೂ ಸ್ತುತ್ಯರ್ಹವಾದುದು. ಸರಕಾರದ ವೆಚ್ಚದಲ್ಲಿ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟು ತನ್ಮೂಲಕ ಜನರೆಲ್ಲರಿಗೂ ಉಪಕಾರಿಯಾಗುವ, ನೀರು ಶೇಖರಿಸಿ, ಇಂಗಿಸಿ, ಜಲಮಟ್ಟವನ್ನು ಎತ್ತರಿಸುವಂತೆ ದುಡಿಸುವ ಕಾರ್ಯವನ್ನು ಮೆಚ್ಚಬೇಕಾದದ್ದೇ. ಆ ಪ್ರಕಾರದಲ್ಲಾದರೂ ಜನ-ಜಾನುವಾರುಗಳು ಗುಳೇ ಹೋಗುವುದನ್ನು ತಪ್ಪಿಸಿದಂತಾಗಿ ಜನರು ಅಲ್ಲಲ್ಲೇ ನೆಲೆಗೊಂಡು ತಮ್ಮ ಊರು, ಕೇರಿ, ಪ್ರದೇಶಗಳಲ್ಲೇ ಸಂಪದ್ಭರಿತಗೊಳಿಸಲು ಅನುವು ಹಾಗೂ ಪ್ರೇರಣೆ ನೀಡಿದಂತಾಗುತ್ತದೆ. ಇದೇ ಜಲ ಪೂರಕ, ಜಲ ಪ್ರೇರಕ, ಸದಾ ವಂದಿತ-ಪೂಜಿತ ಕಲ್ಯಾಣಿ.


- ರಾಯೀ ರಾಜಕುಮಾರ್, ಮೂಡುಬಿದಿರೆ
ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು,
ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,